

ಕೋಲ್ಕತಾ: ಪಶ್ಚಿಮ ಬಂಗಾಳಲದಲ್ಲಿ ಒಟ್ಟು ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದೀಗ ಮೂರನೇ ಹಂತದ ಮತದಾನ ಆರಂಭವಾಗಿದೆ.
ಈ ನಡುವೆಯೇ ವಿಚಿತ್ರ ಬೆಳವಣಿಗೆಯೊಂದರಲ್ಲಿ ಹೌರಾ ಜಿಲ್ಲೆಯ ಉಲುಬೇರಿಯಾ ಉತ್ತರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನ ಮನೆಯಲ್ಲಿ ಇಲೆಕ್ಟ್ರಾನಿಕ್ ಮತದಾನ ಯಂತ್ರ ಮತ್ತು ನಾಲ್ಕು ವಿವಿಪ್ಯಾಟ್ ಗಳು ಪತ್ತೆಯಾಗಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ತ ಬಿಜೆಪಿಯನ್ನು ದೂಷಿಸುವಲ್ಲಿ ನಿರತವಾಗಿದ್ದರೆ ಅವರದ್ದೇ ಪಕ್ಷದ ಕಾರ್ಯಕರ್ತನ ಮನೆಯಲ್ಲಿ ಇವು ಪತ್ತೆಯಾಗಿರುವುದು ದೀದಿಯ ನಿದ್ದೆಗೆಡಿಸಿದೆ.
31 ವಿಧಾನಸಭೆ ಕ್ಷೇತ್ರಗಳಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ತುಳಸಿಬೇರಿಯಾದ ಟಿಎಂಸಿ ನಾಯಕ ಗೌತಮ್ ಘೋಷ್ ನಿವಾಸದಲ್ಲಿ ಮತಯಂತ್ರ ಪತ್ತೆಯಾಗಿವೆ. ಇದನ್ನು ಖಂಡಿಸಿ ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ತನಿಖೆ ನಡೆಸಬೇಕೆಂದು ಉಲುಬೇರಿಯಾ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ ಒತ್ತಾಯಿಸಿದ್ದಾರೆ.
ಮತಯಂತ್ರ ಹಾಗೂ ವಿವಿಪ್ಯಾಟ್ ಪತ್ತೆಯಾಗುತ್ತಿದ್ದಂತೆಯೇ ಭಾರಿ ಸ್ವರೂಪದ ಪ್ರತಿಭಟನೆ ನಡೆದು ಚುನಾವಣಾಧಿಕಾರಿಗೆ ಘೆರಾವ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದಾರೆ.
ಮತಗಟ್ಟೆಯಲ್ಲಿ ಭದ್ರತಾ ಸಿಬ್ಬಂದಿ ನಿದ್ದೆ ಮಾಡುವ ಸಂದರ್ಭದಲ್ಲಿ ಮತಯಂತ್ರಗಳನ್ನು ಹೊರಗೆ ತೆಗೆದುಕೊಂಡು ಹೋಗಲಾಗಿದೆ. ಇವು ಮತಗಟ್ಟೆಯಲ್ಲಿ ಬಳಕೆ ಮಾಡಿಲ್ಲ. ಹೆಚ್ಚುವರಿಯಾಗಿ ಕಾಯ್ದಿರಿಸಲಾದ ಮತಯಂತ್ರಗಳಾಗಿವೆ. ಸೆಕ್ಟರ್ ಆಫೀಸರ್‌ನನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ಆದರೆ ವಿಪಕ್ಷಗಳು ತನಿಖೆ ಒತ್ತಾಯಿಸಿವೆ.