ಪತ್ನಿಯ ಮೇಲಿನ ಸಿಟ್ಟಿನಿಂದ 450 ಕಿ.ಮೀ ನಡೆದ ಪತಿರಾಯ ಪೊಲೀಸರಿಂದ ದಂಡ ಹಾಕಿಸಿಕೊಂಡ!

man
Published on

ರೋಮ್: ಗಂಡ- ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವ ನಾಣ್ಣುಡಿಯಿದೆ. ಆದರೆ ಇಲ್ಲೊಬ್ಬ ಗಂಡ, ಪತ್ನಿಯ ಮೇಲೆ ಮುನಿಸಿಕೊಂಡು ಮನೆಬಿಟ್ಟು ಹೋಗಿದ್ದಾನೆ. ಹೀಗೆ ಮನೆಬಿಟ್ಟು ಹೋದರೆ ಅದು ಇಷ್ಟೆಲ್ಲಾ ದೊಡ್ಡ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಈತ ಮಾಡಿದ್ದು ಮಹಾದೊಡ್ಡ ಕೆಲಸ. ಅದೇನೆಂದರೆ ಸುಮಾರು 450 ಕಿ,ಮೀ ನಡೆದುಕೊಂಡು ಹೋಗಿದ್ದಾನೆ!

ಇಂಥದ್ದೊಂದು ಅಚ್ಚರಿ ಹಾಗೂ ವಿಶೇಷ ಎನಿಸುವ ಘಟನೆ ನಡೆದಿರುವುದು ಇಟಲಿಯಲ್ಲಿ. ಪತ್ನಿಯ ಮೇಲಿನ ಸಿಟ್ಟು ತಣ್ಣಗಾಗುವವರೆಗೂ ನಡೆಯುತ್ತಲೇ ಸಾಗಿದ್ದ ಈತನಿಗೆ 450 ಕಿ.ಮೀ ನಡೆದರೂ ಕೋಪ ಕರಗಲಿಲ್ಲವಂತೆ. ಆದ್ದರಿಂದ ನಡೆಯುತ್ತಲೇ ಸಾಗಿದೆ.

ಇಟಲಿಯ ಲಂಬಾರ್ಡಿಯಾದ ನಿವಾಸಿಯಾದ ಈತ ತನ್ನ ಮನೆಯಿಂದ ಬೊಲೋನಾ ಮಾರ್ಗವಾಗಿ ಫಾನೋ ಎಂಬಲ್ಲಿವರೆಗೆ ಹೋಗಿದ್ದ. ಇದರ ದೂರ ಸುಮಾರು 450 ಕಿ.ಮೀ. ಆದರೆ ಫಾನಾದಲ್ಲಿ ಈತನನ್ನು ಪೊಲೀಸರು ತಡೆದಿದ್ದಾರೆ. ಇದಕ್ಕೆ ಕಾರಣ ಅಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೂ ಕರ್ಫ್ಯೂ ಇದೆ. ಕರೊನಾ ಹಿನ್ನೆಲೆಯಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸಿರುವ ಕಾರಣ, ಪೊಲೀಸರು ಬಂಧಿಸಿದ್ದಾರೆ.

ನಂತರ ಈತ ತನ್ನ ಬಗ್ಗೆ ವಿವರಣೆ ನೀಡಿದ್ದಾರೆ. ಪೊಲೀಸರಿಗೆ ಈತನ ವಿಷಯ ಕೇಳಿ ನಗು ಬಂದಿದೆ. ಆದರೆ ನಿಯಮ ಎಂದರೆ ನಿಯಮ. ಆದ್ದರಿಂದ ಕರೊನಾ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಿದ್ದಾರೆ. ಈತನನ್ನು ಕ್ವಾರಂಟೈನ್​ಗಾಗಿ ಹೋಟೆಲ್​ ಒಂದರಲ್ಲಿ ಉಳಿಸಿದ್ದಾರೆ.

ಸದ್ಯ ಈತನ ವಿರುದ್ಧ ಕರೊನಾ ನಿಯಮ ಉಲ್ಲಂಘನೆ ಕೇಸ್​ ದಾಖಲಾಗಿದೆ. ತನ್ನ ವಿಷಯವನ್ನು ಹಂಚಿಕೊಂಡಿರುವ ಈ ಪತಿರಾಯ, ಮಾರ್ಗ ಮಧ್ಯೆ ಭೇಟಿಯಾದವರು ನನಗೆ ತಿನ್ನಲು ಊಟ ನೀರು ಕೊಟ್ಟರು. ನಾನು ಪತ್ನಿಯ ಮೇಲಿರುವ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ನಡೆದುಕೊಂಡು ಹೋಗಿದ್ದೆ. ದಿನಕ್ಕೆ 40 ಮೈಲಿ ನಡೆಯುತ್ತಿದ್ದೆ. ಈ ರೀತಿಯಾಗಿ 250 ಮೈಲಿ ನಡೆದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.

ಇಷ್ಟೆಲ್ಲಾ ನಡೆದ ಮೇಲೆ ಈತನಿಗೆ ಪತ್ನಿಯ ಮೇಲಿನ ಸಿಟ್ಟು ಕಮ್ಮಿ ಆಯ್ತೋ ಇಲ್ವೋ ಗೊತ್ತಿಲ್ಲ. ಆದರೆ ಅತ್ತ ಮನೆಯಲ್ಲಿಯೇ ಇದ್ದ ಪತ್ನಿ ಮಾತ್ರ ಅನೇಕ ದಿನಗಳವರೆಗೆ ಪತಿಯನ್ನು ಕಾಣದೇ ಕಂಗಾಲಾಗಿ ಹೋಗಿದ್ದಾಳೆ. ನಂತರ ಪತಿ ಮಿಸ್ಸಿಂಗ್​ ಎಂದು ದೂರು ದಾಖಲು ಮಾಡಿದ್ದಾಳೆ. ಸದ್ಯ ಕ್ವಾರಂಟೈನ್​ ಮುಗಿದ ಮೇಲೆ ಪತಿ-ಪತ್ನಿ ಒಂದಾಗುತ್ತಾರೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net