

ಚಿತ್ರದುರ್ಗ: ಸಾಮಾಜಿಕ ಕಳಕಳಿಯ ಜತೆ ನೀರಾವರಿ ಹೋರಾಟದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿರುವ ಉದ್ಯಮಿ, ಚಿತ್ರದುರ್ಗದ ಬಿ.ಎ.ಲಿಂಗಾರೆಡ್ಡಿ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ವಿಜಯ ರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು: ಕೋಟೆನಾಡಿನಲ್ಲಿ ಸ್ಥಾಪನೆಯಾಗಿರುವ ಎಸ್ಆರ್ಎಸ್ ಶಿಕ್ಷಣ ಸಂಸ್ಥೆ ಇಂದು ಮಧ್ಯ ಕರ್ನಾಟಕ ಹಾಗೂ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದೆ. ಉದ್ಯಮಿ, ಸಾಮಾಜಿಕ ಕಳಕಳಿಯ ಜತೆ ನೀರಾವರಿ ಹೋರಾಟದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿರುವ, ಚಿತ್ರದುರ್ಗದ ಬಿ.ಎ.ಲಿಂಗಾರೆಡ್ಡಿ ಅವರಿಂದ ಶ್ರೀ ರಂಗನಾಥಸ್ವಾಮಿ ಎಜುಕೇಶನಲ್ ಟ್ರಸ್ಟ್ನಡಿ ಆರಂಭಿಸಿರುವ ಶಿಕ್ಷಣ ಸಂಸ್ಥೆ, ಎಸ್ಆರ್ಎಸ್ ಸಂಸ್ಥೆ ಎಂದು ರಾಜ್ಯದಲ್ಲಿ ಖ್ಯಾತಿ ಪಡೆದಿದೆ.
ಮೂಲತಃ ಕೃಷಿಕ ಕುಟುಂಬದ, ಶ್ರೀ ರಂಗನಾಥಸ್ವಾಮಿ ಎಕ್ಸ್ಪ್ರೆಸ್ (ಎಸ್ಆರ್ಇ) ಹೆಸರಿನಡಿ ತಮ್ಮ ತಂದೆ ಬಿ.ಅನಂತರೆಡ್ಡಿ ಅವರು ಆರಂಭಿಸಿದ್ದ ಸಾರಿಗೆ ಉದ್ಯಮದ ಯಶಸ್ಸಿನ ನಂತರದಲ್ಲಿ, ಜನರಿಗೆ ಏನಾದರೂ ಸೇವೆ ಮಾಡಬೇಕೆಂಬ ಆದಮ್ಯ ಹಂಬಲದಿಂದ ಲಿಂಗಾರೆಡ್ಡಿ ಅವರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರು.
ಕೃಷಿ, ಹತ್ತಿ ವಹಿವಾಟು, ರಿಯಲ್ ಎಸ್ಟೇಟ್ ಹಾಗೂ ಸಾರಿಗೆ, ಈ ಉದ್ಯಮಗಳೆಲ್ಲವೂ ನಮ್ಮ ಜೀವನಕ್ಕೆ ದಾರಿಯಾಗಿದೆ. ವೃತ್ತಿಯಲ್ಲಿ ನಾವು ಹೀಗೆ ಮುಂದುವರಿದರೆ ನಮ್ಮ ಬದುಕು ಸ್ವಾರ್ಥದಿಂದ ಕೂಡಿದ್ದಾಗಿರುತ್ತದೆಯೇ ಹೊರತು ಸಮಾಜಕ್ಕೆ ನಮ್ಮ ಕೊಡುಗೆ ಏನು?ಅದರ ಋಣ ಹೇಗೆ ತೀರಿಸುವುದೆಂಬ ಪ್ರಶ್ನೆಗಳಿಗೆ ಬಿಎ, ಎಲ್ಎಲ್ಬಿ ಪದವೀಧರರಾಗಿರುವ ಲಿಂಗಾರೆಡ್ಡಿ ಕಂಡುಕೊಂಡ ಉತ್ತರವೇ ಎಸ್ಆರ್ಎಸ್ ಸಮೂಹ ಶಿಕ್ಷಣ ಸಂಸ್ಥೆ. ಚಿತ್ರದುರ್ಗದಲ್ಲಿ 2003 ರಲ್ಲಿ ಎಸ್ಆರ್ಎಸ್ ನರ್ಸಿಂಗ್ ಕಾಲೇಜು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅವರು, 2004 ರಲ್ಲಿ ಎಸ್ಆರ್ಎಸ್ ಬಿಇಡಿ ಕಾಲೇಜು, 2006 ರಲ್ಲಿ ಡಿಇಡಿ ಬಳಿಕ ಎಸ್ಆರ್ಎಸ್ ಪಿಯು ಕಾಲೇಜು ಆನಂತರ ಎಸ್ ಆರ್ಎಸ್ ಹೆರಿಟೇಜ್ ಶಾಲೆ, ಎಸ್ಆರ್ಎಸ್ ಬ್ಲೂಜೆಮ್ ಮಾಂಟೆಸರಿ ಹಾಗೂ ಚಳ್ಳಕೆರೆಯಲ್ಲಿ ಮಾಂಟೆಸರಿಯಿಂದ ಪದವಿವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸಿದರು.
ಈಚೆಗೆ ಈ ಸಂಸ್ಥೆ ಚಿತ್ರದುರ್ಗದ ಆಸ್ಕರ್ ಇಂಟರ್ನ್ಯಾಷನಲ್ ಸ್ಕೂಲ್ ಉಸ್ತುವಾರಿಯನ್ನೂ ಹೊತ್ತಿದೆ. ಗುಣಮಟ್ಟದ ಶಿಕ್ಷಣದಿಂದಾಗಿ ಬಹುಬೇಗ ಪಾಲಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿದ್ದು, ಪ್ರತಿ ವರ್ಷ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿ, ಉನ್ನತ ಶಿಕ್ಷಣ, ಉದ್ಯೋಗಗಳಿಗೆ ತೆರಳುತ್ತಿದ್ದಾರೆ.
ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಿ.ಅನಂತರೆಡ್ಡಿ-ಕೃಷ್ಣಮ್ಮ ದಂಪತಿ ಪುತ್ರ ಬಿ.ಎ.ಲಿಂಗಾರೆಡ್ಡಿ ತಂದೆಯ ಶಿಸ್ತಿನ ನೆರಳಿನಲ್ಲೇ ವೃತ್ತಿಯಲ್ಲಿ ಬೆಳಕು ಕಂಡವರು. ತಂದೆ ಅನಂತರೆಡ್ಡಿ 1954 ರಲ್ಲಿ ಆರಂಭಿಸಿದ ಎಸ್ಆರ್ಇ ಈಗ ಸಾರಿಗೆ ಕ್ಷೇತ್ರದಲ್ಲೂ (ಖಾಸಗಿ ಬಸ್ಸುಗಳು ಹಾಗೂ ಸರಕು ಸಾಗಣೆ ವಾಹನಗಳು) ಹೆಸರು ಮಾಡಿದೆ. 45 ಕ್ಕೂ ಹೆಚ್ಚು ಖಾಸಗಿ ಬಸ್ಗಳು, 30ಕ್ಕೂ ಹೆಚ್ಚು ಶಾಲಾ ಬಸ್ಗಳೊಂದಿಗೆ ಅನಂತಗ್ರೂಪ್ ಹೆಸರಿನ ಎಸ್ಆರ್ಇ ಸಾರಿಗೆ ಸಂಸ್ಥೆ 2013 ರಿಂದ ಕಾಗೋರ್ ಸರ್ವಿಸ್ಗೂ ಎಂಟ್ರಿ ಆಗಿದೆ. ಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅವರ ಪುತ್ರ ಬಿ.ಎಲ್.ಅಮೋಘ್ ಸಾರಿಗೆ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.
40 ಕ್ಕೂ ಹೆಚ್ಚು ಕ್ಲೋಸ್ಡ್ ಕಂಟೈನರ್ಗಳು, 55 ಶಾಖೆಗಳೊಂದಿಗೆ ಎಸ್ಆರ್ಇ ಕಾಗೋರ್ ಸರ್ವಿಸ್ನ್ನು ನಡೆಸಲಾಗುತ್ತಿದೆ. ಒಟ್ಟು ಶಾಖೆ ಗಳ ಪೈಕಿ 16 ವಿವಿಧ ಹೊರ ರಾಜ್ಯಗಳಲ್ಲಿವೆ. 400 ಕ್ಕೂ ಹೆಚ್ಚು ಬೋಧಕ, ಬೋಧಕೇತರ ಹಾಗೂ ಸಾರಿಗೆಯಲ್ಲಿ 425 ಸಿಬ್ಬಂದಿ ಸಹಿತ 825 ಕ್ಕೂ ಹೆಚ್ಚು ಜನರು ಹಾಗೂ ಅವರ ಅವಲಂಬಿತ ಸಾವಿರಾರು ಜನರ ಜೀವನಕ್ಕೆ ಎಸ್ಆರ್ಎಸ್ ಹಾಗೂ ಎಸ್ಆರ್ಇ ಸಂಸ್ಥೆಗಳು ದಾರಿಯಾಗಿದೆ.
ಸಮಾಜಸೇವೆಗೆ ರಾಜಕೀಯವೇ ಅಂತಿಮವಲ್ಲ
ಸಮಾಜ ಸೇವೆಗೆ ರಾಜಕೀಯವೊಂದೇ ಅಂತಿಮ ಕ್ಷೇತ್ರವಲ್ಲ ಎನ್ನುವ ಲಿಂಗಾರೆಡ್ಡಿ ಅವರು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರ ಪ್ರೋತ್ಸಾಹ ಮತ್ತು ಸ್ಫೂರ್ತಿಯಿಂದಾಗಿ 8 ವರ್ಷಗಳ ಹಿಂದೆ ಸ್ಕೌಟ್ಸ್ ಹಾಗೂ ಗೈಡ್ಸ್ ಆಂದೋಲನದ ಕಡೆ ಆಸಕ್ತಿ ಬೆಳೆಸಿಕೊಂಡು ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳ ಹಲವು ತಾಲೂಕುಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಶ್ರೀ ಅನುಷ್ಠಾನವಾಗಬೇಕಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಸಂಸ್ಥೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಪತ್ನಿ ಸುಜಾತ (ಪಿ.ಸುಜಾತ ಲಿಂಗಾರೆಡ್ಡಿ) ಹಾಗೂ ಪುತ್ರ, ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋ ಮತ್ತು ಕುಟುಂಬದ ಎಲ್ಲ ಸದಸ್ಯರ ಬೆಂಬಲ, ಶ್ರಮ ಹಾಗೂ ಎಲ್ಲ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಎಸ್ಆರ್ಎಸ್ ಇಂದು ಹೆಸರು ಪಡೆಯಲು ಕಾರಣವಾಗಿದೆ.
| .ಎ.ಲಿಂಗಾರೆಡ್ಡಿ ಶಿಕ್ಷಣ ಪ್ರೇಮಿ, ಚಿತ್ರದುರ್ಗ