

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ನ (ಐಸಿಎಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಕಾಟನ್ ರಿಸರ್ಚ್ನ (ಸಿಐಸಿಆರ್) ತಮಿಳುನಾಡು ಘಟಕದಲ್ಲಿ ಯಂಗ್ ಪ್ರೊಫೆಷನಲ್ಸ್ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಹತ್ತಿ ಉತ್ಪಾದನಾ ವೆಚ್ಚವನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರ ಜತೆಗೆ ಭಾರತೀಯ ಹತ್ತಿ ಉತ್ಪಾದನೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಉದ್ದೇಶ ಇಟ್ಟುಕೊಂಡು ಕಾರ್ಯನಿರ್ವಹಿಸುವ ಹತ್ತಿ ಸಂಶೋಧನಾ ಸಂಸ್ಥೆಯು ನಾಗಪುರ್, ಕೊಯಮತ್ತೂರು, ಸಿರ್ಸಾದಲ್ಲಿ ಕೇಂದ್ರಗಳನ್ನು ಹೊಂದಿದೆ. ಮುಂದಿನ ವರ್ಷಗಳಲ್ಲಿ ಪರಿಸರಸ್ನೇಹಿ ಉತ್ಪಾದನೆ ಹಾಗೂ ಸಂರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಾವಂತ ಯುವ ವೃತ್ತಿಪರರ ಹುಡುಕಾಟ ನಡೆಸಿದೆ.
ಈ ಹುದ್ದೆಗಳು ತಾತ್ಕಾಲಿಕ ಒಪ್ಪಂದದ ಆಧಾರದಲ್ಲಿ 31.3.2022ರ ವರೆಗೆ ಅಥವಾ ಯೋಜನೆ ಪೂರ್ಣಗೊಳ್ಳುವವರೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಂಸ್ಥೆಯ ನಿಯಮದಂತೆ ರಜೆಗಳು ಅನ್ವಯವಾಗಲಿವೆ. ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ವಯೋಮಿತಿ, ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ, ಜಾತಿ, ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ರಿಜಿಸ್ಟ್ರೇಷನ್ ಕಾರ್ಡ್ ಹಾಗೂ ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ತರಲು ಸೂಚಿಸಲಾಗಿದೆ. ಸಂದರ್ಶನಕ್ಕೂ ಮುನ್ನ ಒಂದು ಗಂಟೆ ಲಿಖಿತ ಪರೀಕ್ಷೆ ನಡೆಸಲಾಗುವುದು.
ಈ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 21, ಗರಿಷ್ಠ 45 ವರ್ಷ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸಂಸ್ಥೆ ನಿಯಮದನ್ವಯ ವಯೋ ಸಡಿಲಿಕೆ ನೀಡಲಾಗುವುದು. ಯಂಗ್ ಪ್ರೊಫೆಷನಲ್ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಕಾಯಂ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಒತ್ತಡ ತರುವಂತಿಲ್ಲ ಎಂದು ಸೂಚಿಸಲಾಗಿದೆ.
ಹುದ್ದೆ ವಿವರ
* ಯಂಗ್ ಪ್ರೊಫೆಷನಲ್-ಐ - 9
ಕೃಷಿಯಲ್ಲಿ ಬಿಎಸ್ಸಿ, ವಿಜ್ಞಾನದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಕೃಷಿ ಅರ್ಥಶಾಸ್ತ್ರ, ಸ್ಟಾ್ಯಟಿಸ್ಟಿಕ್ಸ್ನಲ್ಲಿ ಎಂಎಸ್ಸಿ ಮಾಡಿರುವವರು ಅರ್ಜಿ ಸಲ್ಲಿಸಬಹುದು. ದಕ್ಷಿಣವಲಯಗಳಾದ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣದಿಂದ ಮಾಹಿತಿ ಕಲೆ ಹಾಕುವುದು ಈ ಹುದ್ದೆಯ ಜವಾಬ್ದಾರಿಯಾಗಿರುತ್ತದೆ. ಮಾಸಿಕ 25,000 ರೂ. ವೇತನ ಇದೆ.
* ಯಂಗ್ ಪ್ರೋಫೆಷನಲ್-ಐಐ - 1
ಕಂಪ್ಯೂಟರ್ ಅಪ್ಲಿಕೇಷನ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಫಮೇಷನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಮಾಸಿಕ 35,000 ರೂ. ವೇತನ ನಿಗದಿಯಾಗಿದೆ.
ಸಂದರ್ಶನ ನಡೆಯುವ ದಿನಾಂಕ: 2021ರ ಆಗಸ್ಟ್ 9 ಮತ್ತು 10
ಸಂದರ್ಶನ ನಡೆಯುವ ಸ್ಥಳ: : ICAR-Central Institute for Cotton Research (ICAR), Regional Station, Maruthamalai Road, Coimbatore – 641 003, Tamil Nadu.
ಅಧಿಸೂಚನೆಗೆ: https://bit.ly/3l5Mv2T
ಮಾಹಿತಿಗೆ: http://www.cicr.org.in