ಇವಳ ಗಂಡನೂ ಅವನೇ, ಅವಳ ಗಂಡನೂ ಇವನೇ- ಅವಳಿ ಜವಳಿ ಕಥೆ ಕಟ್ಟಿ ಇಬ್ಬರನ್ನೂ ಒಲಿಸಿಕೊಂಡ!

twins
Published on

ಚೆನ್ನೈ: ಸಿನಿಮಾಗಳಲ್ಲಿ ಡಬಲ್‌ ಆ್ಯಕ್ಟಿಂಗ್‌ ನೋಡಿರುತ್ತೀರಿ. ಒಬ್ಬರೇ ಅವಳಿ-ಜವಳಿಯಾಗುವ ಜತೆಗೆ ಕೆಲವೊಂದು ಚಿತ್ರಗಳಲ್ಲಿ ಅಪ್ಪ-ಅಮ್ಮನೂ ಒಬ್ಬರೇ ಆಗಿರುತ್ತಾರೆ. ಇದರಿಂದಲೇ ಉತ್ತೇಜನಗೊಂಡ ಯುವಕನೊಬ್ಬ ಅವಳಿ ಜವಳಿ ಕಥೆ ಹೇಳಿ ಇಬ್ಬರನ್ನು ಬುಟ್ಟಿಗೆ ಹಾಕಿಕೊಳ್ಳುವವಲ್ಲಿ ಯಶಸ್ವಿಯಾಗಿ ಇದೀಗ ಪೇಚಿಗೆ ಸಿಲುಕಿದ್ದಾನೆ.

ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎಂಬಾತ ಒಂದು ಮದುವೆಯಾಗಿ, ಇದೀಗ ಎರಡನೇ ಮದುವೆಯಾಗಲು ಯೋಜನೆ ರೂಪಿಸಿ ಸಿಕ್ಕಿಬಿದ್ದಿದ್ದಾನೆ.

30 ವರ್ಷದ ರಾಯನ್‌ಗೆ ಇದಾಗಲೇ ಮದುವೆಯಾಗಿದ್ದು ಮಗು ಕೂಡ ಇದೆ. ಆದರೆ ಈತ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯನ್ನು ಪ್ರೀತಿಸತೊಡಗಿದ್ದ. ಅವಳನ್ನು ಮದುವೆಯಾಗುವ ಭರವಸೆ ಕೊಟ್ಟು ಬಹು ಹತ್ತಿರವಾಗಿದ್ದ. ಈತನಿಗೆ ಮದುವೆಯಾಗಿರುವ ವಿಷಯ ಆಕೆಗೆ ಗೊತ್ತಿರಲಿಲ್ಲ. ಮನೆಯವರು ಕೂಡ ಮದುವೆಗೆ ಒಪ್ಪಿ ನಿಶ್ಚಿತಾರ್ಥ ಮಾಡಿದರು.

ಇದೇ ವೇಳೆ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಕೂಡ ಈತ ಪಡೆದುಕೊಂಡ. ಈ ನಡುವೆಯೇ ಯುವತಿಗೆ ಯಾರೋ ವಿಷಯ ತಿಳಿಸಿ ಇವನಿಗೆ ಇದಾಗಲೇ ಮದುವೆಯಾಗಿದೆ ಎಂದಿದ್ದಾರೆ. ನಂತರ ಯುವಕನ ಬಳಿ ವಿಷಯ ಕೇಳಿದಾಗ ಆತ ತನಗೆ ಅವಳಿ ಸಹೋದರನೊಬ್ಬನಿದ್ದಾನೆ. ಎಲ್ಲರೂ ನಿನ್ನ ಹಾಗೆ ಕನ್‌ಫ್ಯೂಸ್‌ ಮಾಡಿಕೊಳ್ಳುತ್ತಾರೆ. ಅವನಿಗೆ ಮದುವೆಯಾಗಿ ಮಗುವಿದೆ ಎಂದು ಯುವತಿ ಮತ್ತು ಆಕೆಯ ಕುಟುಂಬದವರನ್ನು ನಂಬಿಸಿದ್ದಾನೆ. ಜತೆಗೆ ತನ್ನ ಅಣ್ಣ ದುಬೈನಲ್ಲಿದ್ದಾನೆ ಎಂದಿದ್ದಾನೆ.

ಸಾಲದು ಎಂಬುದಕ್ಕೆ ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದಾನೆ. ಆದರೆ ಈ ವೇಳೆಗಾಗಲೇ ಈತ ಮೋಸ ಮಾಡುತ್ತಿರುವಾಗಿ ಯುವತಿಗೆ ಹೇಳಿದ್ದರಿಂದ ಅವಳು ಸಂದೇಹಗೊಂಡು ನಿಜ ವಿಷಯ ತಿಳಿಸದಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ.

ಆಗ ಯುವಕ ಅಸಲಿ ಮುಖ ತೋರಿಸಿ ತನ್ನ ಬಗ್ಗೆ ಹೇಳಿಕೊಂಡು ಕಂಪ್ಲೇಂಟ್‌ ಕೊಟ್ಟರೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆದರೂ ಯುವತಿ ದೂರು ನೀಡಿದ್ದರಿಂದ ಸದ್ಯ ರಾಯನ್‌ ಪೊಲೀಸ್ ಅತಿಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net