

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಂದು, ಜೋ ಬೈಡೆನ್ ಅಧ್ಯಕ್ಷರು ಎಂದು ಘೋಷಣೆಯಾಗಿ 15 ದಿನಗಳ ಮೇಲಾದರೂ ಡೊನಾಲ್ಡ್ ಟ್ರಂಪ್ ಮಾತ್ರ ಇದುವರೆಗೂ ಸೋಲನ್ನು ಒಪ್ಪಿಕೊಂಡಿರಲಿಲ್ಲ. ಮತ ಎಣಿಕೆಯಲ್ಲಿ ತಪ್ಪಾಗಿರುವುದಾಗಿಯೇ ಹೇಳುತ್ತ ಬಂದು ಕೆಲವು ಕ್ಷೇತ್ರಗಳಲ್ಲಿ ಮರು ಎಣಿಕೆಯನ್ನೂ ಮಾಡಿಸಿದರು.
ಆದರೆ ಈಗ ಎಲ್ಲವೂ ಅಂತಿಮ ಹಂತಕ್ಕೆ ಬಂದಂತಿದೆ. ಕೊನೆಗೂ ಡೊನಾಲ್ಡ್ ಟ್ರಂಪ್ ಸತ್ಯವನ್ನು ಒಪ್ಪಿಕೊಂಡಂತೆ ಭಾಸವಾಗುತ್ತಿದೆ. ತಾವು ಸೋತಿರುವುದನ್ನು ಕೊನೆಗೂ ಒಪ್ಪಿಕೊಂಡಿರುವಂತಿದೆ. ಇದಕ್ಕೆ ಕಾರಣ, ಅಮೆರಿಕದ ಅಧಿಕಾರದ ಪರಿವರ್ತನೆ ಕಾರ್ಯ ಆರಂಭಿಸುವಂತೆ ಅವರು ಈಗ ಸೂಚನೆ ನೀಡಿದ್ದಾರೆ. ಈ ಮೂಲಕ ಶ್ವೇತಭವನದ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಅವರು ಬಿಟ್ಟುಕೊಡುವ ಲಕ್ಷಣ ಕಾಣುತ್ತಿದೆ.
ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಅಧಿಕಾರಿಗಳಿಗೆ ಅಧಿಕಾರ, ಆಡಳಿತ ಪರಿವರ್ತನೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜೋ ಬೈಡೆನ್ ಅವರಿಗೆ ಶ್ವೇತಭವನಕ್ಕೆ ಕಾಲಿಡಲು ಅಗತ್ಯವಾದ ಸರ್ಕಾರದ ಸಂಪನ್ಮೂಲಗಳನ್ನು ಒದಗಿಸಲು ಮುಂದಾಗಿರುವುದಾಗಿ ಫೆಡರಲ್ ಏಜೆನ್ಸಿಯ ಮುಖ್ಯಸ್ಥರು ಹೇಳಿದ್ದಾರೆ.
ಟ್ರಂಪ್ ಅವರು ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭಿಸಲು ಸಿದ್ಧರಿದ್ದಾರೆ ಎಂದು ಸಾಮಾನ್ಯ ಸೇವೆಗಳ ನಿರ್ವಾಹಕರಾದ (ಜಿಎಸ್‌ಎ) ಎಮಿಲಿ ಮರ್ಫಿ ಅವರು ಜೋ ಬೈಡನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಇದೀಗ ಹೊಸ ಪರ್ವ ಶುರುವಾಗುವಂತೆ ಕಾಣುತ್ತಿದೆ.
'ಕಾನೂನು ಮತ್ತು ಲಭ್ಯವಿರುವ ವಿಷಯಗಳ ಆಧಾರದಲ್ಲಿ ಸ್ವತಂತ್ರವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಈ ನಿರ್ಧಾರ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಶಾಖೆಯ ಅಧಿಕಾರಿಗಳಾಗಲಿ, ಶ್ವೇತ ಭವನದ ಅಧಿಕಾರಿಗಳಾಗಲಿ ಒತ್ತಡ ಹೇರಲಿಲ್ಲ' ಎಂದು ಎಮಿಲಿ ಮರ್ಫಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, 'ಜಿಎಸ್‌ಎಯ ದೇಶದ ಮೇಲಿನ ನಿಷ್ಠೆಕ್ಕಾಗಿ ನಾನು ಎಮಿಲಿ ಮರ್ಫಿ ಅವರಿಗೆ ಧನ್ಯವಾದ ಹೇಳುತ್ತೇನೆ. ದೇಶದ ಹಿತದೃಷ್ಟಿಯಿಂದ ನಿಯಮಾನುಸಾರ ಏನು ಮಾಡಬೇಕು ಅದನ್ನೇ ಮಾಡಿ ಎಂದು ಎಮಿಲಿಗೆ ನಾನು ಸಲಹೆ ನೀಡುತ್ತೇನೆ. ನನ್ನ ತಂಡ ಕೂಡ ಅದನ್ನೇ ಪಾಲಿಸುತ್ತದೆ' ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಜತೆಗೆ ನಾವು ಚುನಾವಣಾ ಅಕ್ರಮದ ವಿರುದ್ಧ ಹೋರಾಡುತ್ತೇವೆ. ಮೇಲುಗೈ ಸಾಧಿಸುತ್ತೇವೆ' ಎಂದಿದ್ದಾರೆ.
ಅಂದರೆ ತಾವು ಸೋತಿರುವುದನ್ನು ಒಪ್ಪಿಕೊಂಡಿದ್ದರೂ, ಟ್ರಂಪ್, ಬೈಡನ್ ವಿರುದ್ಧ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. (ಏಜೆನ್ಸೀಸ್)