ತುಂಬು ಗರ್ಭಿಣಿಗಾಗಿ ವಾಪಸ್‌ ಬಂತು ರೈಲು! ನಡೆಯಿತು ಹೆರಿಗೆ- ಟ್ರೇನ್‌ ಲೇಟಾದರೂ ಭಾರಿ ಮೆಚ್ಚುಗೆ

train
ಸಾಂದರ್ಭಿಕ ಚಿತ್ರ
Published on

ಟಾಟಾನಗರ (ಜಾರ್ಖಂಡ್): ತುಂಬು ಗರ್ಭಿಣಿಯೊಬ್ಬಳಿಗೆ ರೈಲು ಹೊರಟ ಕೆಲವೇ ಕ್ಷಣಗಳಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ರೈಲು ವಾಪಸ್‌ ಬಂದು ಹೆರಿಗೆ ಮಾಡಿಸಿಉವ ಘಟನೆ ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದಿದ್ದು, ಈ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮಹಿಳೆ ತುಂಬು ಗರ್ಭಿಣಿಯಾಗಿದ್ದರೂ ಹೆರಿಗೆ ಅವಧಿ ಇನ್ನೂ ಮುಂದೆ ಇದ್ದುದರಿಂದ ರೈಲಿಗೆ ಹತ್ತಿದ್ದಳು. ರಾಣು ದಾಸ್ ಎಂಬ ಮಹಿಳೆ ಒಡಿಶಾಗೆ ಹೋಗಲು ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಏರಿದ್ದಳು. ಆದರೆ ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಬೆಳಗ್ಗೆ 4.10ಕ್ಕೆ ಜೆಮ್‌ಶೆಡ್‌ಪುರ ಬಳಿಯ ಟಾಟಾನಗರದಿಂದ ರೈಲು ಹೊರಟಿತ್ತು. ಎರಡೂವರೆ ಕಿಲೋಮೀಟರ್‌ನಷ್ಟು ರೈಲು ಹೋದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವು ಶುರುವಾಗಿದೆ. ಕೂಡಲೇ ಆಕೆಯ ಕುಟುಂಬಸ್ಥರು ರೈಲಿನ ತುರ್ತು ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ನಂತರ ಅಲ್ಲಿಯೇ ನಿಲ್ಲಿಸಿ ರೈಲಿನಲ್ಲಿ ಹೆರಿಗೆ ಮಾಡಿಸಲಾಗಿದೆ.

ರೈಲು ನಿಂತಿರುವುದನ್ನು ತಿಳಿದ ಆರ್‌ಪಿಎಫ್ ಸಿಬ್ಬಂದಿ, ಟಾಟಾನಗರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ನಿಲ್ದಾಣ ತಲುಪಲು ಕನಿಷ್ಠ ಎರಡೂವರೆ ಗಂಟೆ ಬೇಕಾಗಿತ್ತು. ಇದರಿಂದಾಗಿ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಬಹುದು ಎಂದು ಗಮನಿಸಿದ ಅಧಿಕಾರಿಗಳು ರೈಲನ್ನು ಟಾಟಾನಗರ ನಿಲ್ದಾಣಕ್ಕೆ ಮತ್ತೆ ವಾಪಸ್‌ ಕರೆಸಿದ್ದಾರೆ.

ನಂತರ ತಾಯಿ ಮತ್ತು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ರೈಲು ಹೊರಡಲು ವಿಳಂಬವಾಗಿದೆ. ಆ ಕ್ಷಣದಲ್ಲಿ ಪ್ರಯಾಣಿಕರಿಗೆ ಏನು ಆಯಿತೆಂದು ತಿಳಿಯಲಿಲ್ಲ. ಕೊನೆಗೆ ವಿಷಯ ತಿಳಿದು ಹಲವರು ಅಧಿಕಾರಿಗಳ ಕ್ರಮಕ್ಕೆ ಶ್ಲಾಘನೆ ವ್ಯಕ್ತ‍‍ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net