

ವಾರಣಾಸಿ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬದಲು ವಸ್ತ್ರಸಂಹಿತೆಯನ್ನು ಕಾಪಾಡಿಕೊಂಡು ಬರುವಂತೆ ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿಗಳು ಆದೇಶಿಸಿದ್ದಾಗ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವು. ಇದೀಗ ಅಂಥದ್ದೇ ಕೊಲೆ ಬೆದರಿಕೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಆದೇಶ ನೀಡಿರುವ ನ್ಯಾಯಾಧೀಶರಿಗೆ ಬಂದಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿದ ನ್ಯಾಯಾಧೀಶ ವಾರಣಾಸಿಯ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಇಸ್ಲಾಮಿಕ್ ಆಗಾಜ್ ಮೂವ್ಮಂಟ್ ಎಂಬ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ.
ಕಳೆದ ಮೇ 20ರಂದು ಸುಪ್ರೀಂಕೋರ್ಟ್ ಜ್ಞಾನವಾಪಿ ಪ್ರಕರಣವನ್ನು ಸಿವಿಲ್ ನ್ಯಾಯಾಲಯದಿಂದ ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜ್ಞಾನವ್ಯಾಪಿ ಮಸೀದಿಗೆ ಸಂಬಂಧಿಸಿ ಸಮೀಕ್ಷೆಯನ್ನು ಮಾಡಲು ಆಯೋಗವನ್ನು ರಚಿಸಲು ಆದೇಶಿಸಿದ್ದರು. ಈ ಬೆನ್ನಲ್ಲೇ ಸಿವಿಲ್ ನ್ಯಾಯಾಧೀಶರಿಗೆ ಬೆದರಿಕೆ ಕರೆಗಳು ಬಂದಿವೆ.
ಕೈಬರಹದ ಪತ್ರದಲ್ಲಿರುವ ಇಸ್ಲಾಮಿಕ್ ಅಗಾಜ್ ಚಳವಳಿಯ ಅಧ್ಯಕ್ಷ ಕಾಸಿಫ್ ಅಹ್ಮದ್ ಸಿದ್ದಾಕಿ ಈ ಪತ್ರವನ್ನು ಬರೆದಿದ್ದಾನೆ. ನ್ಯಾಯಾಧೀಶರು ಕೂಡ ಕೇಸರಿ ಬಣ್ಣದ ಪರವಾಗಿಯೇ ಇದ್ದಾರೆ ಎಂದು ಹೇಳಿ ಜೀವ ಬೆದರಿಕೆಯನ್ನು ಹಾಕಿದ್ದಾನೆ. ಇದರ ಜೊತೆಗೆ ಪತ್ರದಲ್ಲಿ ಪ್ರಧಾನ ಮಂತ್ರಿ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿವೆ.
ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ), ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ವಾರಣಾಸಿ ಪೊಲೀಸ್ ಕಮಿಷನರೇಟ್‌ಗೆ ಪತ್ರ ಬರೆದು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ನ್ಯಾಯಾಧೀಶರ ಭದ್ರತೆಗಾಗಿ ಈಗಾಗಲೇ ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗ ವಿಷಯದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಧೀಶರ ರಕ್ಷಣೆಗೆ ಹತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.