

ಹೈದರಾಬಾದ್: ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ನೇಮಿಸಲ್ಪಟ್ಟ ಮಹಿಳೆಯೊಬ್ಬಳು ವೃದ್ಧೆಯ ದೃಷ್ಟಿಯನ್ನೇ ತೆಗೆದುಹಾಕಿರುವ ಭಯಾನಕ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಲಂಡನ್ನಲ್ಲಿ ಉದ್ಯೋಗದಲ್ಲಿ ಇರುವ ಶಶಿಧರ್ ಎನ್ನುವವರು ತಮ್ಮ 75 ವರ್ಷದ ತಾಯಿಯನ್ನು ನೋಡಿಕೊಳ್ಳಲು ಭಾರ್ಗವಿ ಎನ್ನುವ 32 ವರ್ಷದ ಮಹಿಳೆಯನ್ನು ನೇಮಕ ಮಾಡಿದ್ದರು. ಹೈದರಾಬಾದ್‌ನ ನಾಚಾರಂ ಸಮೀಪದ ಶ್ರೀನಿಧಿ ಅಪಾರ್ಟ್‌ಮೆಂಟ್‌ನಲ್ಲಿ ಇವರು ವಾಸವಾಗಿದ್ದಾರೆ.
ಭಾರ್ಗವಿ 2021ರ ಆಗಸ್ಟ್‌ನಿಂದ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಳು. ತನ್ನ 7 ವರ್ಷದ ಮಗಳೊಂದಿಗೆ ದಿನವೂ ಬಂದು ವೃದ್ಧೆಗೆ ಬೇಕಾದ ಆಹಾರ ನೀಡುತ್ತಾ ಮನೆಗೆಲಸ ಮಾಡಿ ಹೋಗುತ್ತಿದ್ದಳು. ಈ ವೇಳೆ, ಮನೆಯಲ್ಲಿದ್ದ ಚಿನ್ನ, ಹಣದ ಮೇಲೆ ಭಾರ್ಗವಿ ಕಣ್ಣುಬಿದ್ದಿದೆ. ಸುಮಾರು 6 ತಿಂಗಳಿಂದ ಕಳ್ಳತನಕ್ಕೆ ಪ್ಲ್ಯಾನ್ ಮಾಡಿದ್ದಳು.
ಒಂದು ದಿನ ಹೇಮಾವತಿ ಕಣ್ಣು ನೋವು ಎನ್ನುತ್ತಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಭಾರ್ಗವಿ, ಐ ಡ್ರಾಪ್ ಹಾಕ್ತೀನಿ ಎಂದು ಹೇಳಿ, ಅದಕ್ಕೆ ಹಾರ್ಪಿಕ್ ಹನಿ, ಝಂಡೂ ಬಾಮ್ ಹಾಕಿದ್ದಾಳೆ. ಅಜ್ಜಿ ನೋವಿನಿಂದ ನರಳುತ್ತಾ ಇದ್ದರೆ, ಈಕೆ ಮನೆಯಲ್ಲಿದ್ದ 40 ಸಾವಿರ ನಗದು, ಎರಡು ಚಿನ್ನದ ಬಳೆಗಳು, ಒಂದು ಚಿನ್ನದ ಸರ ಹಾಗೂ ಇತರೆ ಆಭರಣಗಳನ್ನು ಕದ್ದು, ಎಸ್ಕೇಪ್ ಆಗಿದ್ದಾಳೆ.
ಇತ್ತ ಹೇಮಾವತಿಯವರು ರಾಸಾಯನಿಕದಿಂದಾಗಿ ಶಾಶ್ವತ ಕಣ್ಣನ್ನು ಕಳೆದುಕೊಂಡಿದ್ದಾರೆ! ಹೇಮಾವತಿ ಅವರ ಪುತ್ರ ಶಶಿಧರ್ ನೀಡಿದ ದೂರಿನ ಅನ್ವಯ ಪೊಲೀಸರು ಭಾರ್ಗವಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಭಾರ್ಗವಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.