ಮೊಬೈಲ್‌ ರಿಪೇರಿ ಮಾಡುತ್ತಿದ್ದ ಮಗನೀಗ ಶಾಸಕ: ಶಾಲೆಯಲ್ಲಿ ಕಸಗುಡಿಸೋದನ್ನು ಮುಂದುವರೆಸಿದ ಅಮ್ಮ

MLA
Published on

ಅಮೃತಸರ: ಮಗ ದೇಶದ ಪ್ರಧಾನಿಯಾದರೂ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ಮೋದಿಯವರು ಇದುವರೆಗೂ ಚಿಕ್ಕ ಮನೆಯಲ್ಲಿಯೇ ಸರಳ ಜೀವನ ನಡೆಸುತ್ತಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಇದೇ ರೀತಿ ಇದೀಗ ಮತ್ತೊಮ್ಮ ಅಮ್ಮ ಸುದ್ದಿಯಾಗಿದ್ದಾರೆ.

ಅದು ಆಮ್ ಆದ್ಮಿ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಅವರ ತಾಯಿ ಬಲ್ದೇವ್ ಕೌರ್. ಪಂಜಾಬ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ಲಭ್‌ ಸಿಂಗ್‌ ಉಗೋಕೆ. ಈ ಮೂಲಕ ಶಾಸಕರಾಗಿದ್ದಾರೆ.

ಆದರೆ ಅವರ ತಾಯಿ ಮಾತ್ರ ಇದಾವುದನ್ನೂ ತಲೆಗೆ ಹಾಕಿಕೊಳ್ಳಲೇ ಇಲ್ಲ. ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿರುವ ಬಲ್ದೇವ್ ಕೌರ್, ಮಗ ಶಾಸಕನಾದರೂ ತಮ್ಮ ಕೆಲಸ ಮುಂದುವರೆಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ಅವರನ್ನೇ ಸೋಲಿಸಿದವರು ಲಭ್‌ ಸಿಂಗ್‌. ಇಷ್ಟಾದರೂ ತಾಯಿ ಮಾತ್ರ ತಮ್ಮ ಕರ್ತವ್ಯವನ್ನು ನಿಲ್ಲಿಸಿಲ್ಲ. ಅವರು ಇದೇ ಕೆಲಸದಲ್ಲಿ ಮುಂದುವರೆದಿದ್ದಾರೆ.

ನಾವು ಬಹಳ ಹಿಂದಿನಿಂದಲೂ ಹಣ ಸಂಪಾದಿಸಲು ಕಷ್ಟಪಟ್ಟು ಶ್ರಮಿಸಿದ್ದೇವೆ. ನನ್ನ ಮಗ ಈಗ ಶಾಸಕನಾಗಿದ್ದಾನೆ. ಆತ ಗೌರವಾನ್ವಿತ ಸ್ಥಾನ ಪಡೆದರೂ ನನ್ನ ಹಳೆಯ ಕಾಯಕವನ್ನು ನಾನು ಮುಂದುವರೆಸುತ್ತೇನೆ. ನಾನು ಶಾಲೆಯಲ್ಲಿ ಈಮುನ್ನ ನಿರ್ವಹಿಸುತ್ತಿದ್ದ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದು ಕೌರ್ ವಿವರಿಸಿದ್ದಾರೆ.

ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲಭ್ ಸಿಂಗ್ ಪಂಜಾಬ್​ನ ಭದೌರ್ ವಿಧಾನಸಭಾ ಕ್ಷೇತ್ರದಲ್ಲಿ 37,550 ಮತಗಳ ಅಂತರದಿಂದ ಲಭ್ ಸಿಂಗ್ ಗೆಲುವು ಸಾಧಿಸಿದ್ದಾರೆ.

ಉಗೋಕೆ ಅವರ ತಂದೆ ದರ್ಶನ್ ಸಿಂಗ್ ಚಾಲಕರಾಗಿದ್ದಾರೆ. ಅವರು ಸಹ ನಮ್ಮ ಕುಟುಂಬವು ಹಿಂದಿನ ರೀತಿಯಲ್ಲಿಯೇ ಮುಂದುವರಿಯುತ್ತದೆ. ಮಗ ಶಾಸಕರಾದ ನಂತರ ಹೆಚ್ಚೇನೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net