ಅತ್ಯಾಚಾರ ಸಂತ್ರಸ್ತೆಯ ತಲೆ ಬೋಳಿಸಿ, ಕಪ್ಪು ಮಸಿ ಬಳಿದು ಕೇಕೆ ಹಾಕಿದ ಮಹಿಳೆಯರು! ದೆಹಲಿಯಲ್ಲೊಂದು ಅಮಾನವೀಯ ಕೃತ್ಯ

rape pic new
Published on

ನವದೆಹಲಿ: ಸಾಮೂಹಿಕವಾಗಿ ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯ ಮುಖಕ್ಕೆ ಮಸಿ ಬಳಿದು, ಆಕೆಗೆ ಚಪ್ಪಲಿ ಹಾರ ಹಾಕಿ ಖುದ್ದು ಮಹಿಳೆಯರೇ ಮೆರವಣಿಗೆ ಮಾಡಿ ಕೇಕೇ ಹಾಕಿರುವ ಅತ್ಯಂತ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಪೂರ್ವ ದೆಹಲಿಯ ಶಹದಾರಾದಲ್ಲಿ ಈ ಘಟನೆ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಅತ್ಯಾಚಾರ ಎಸಗಿ, ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎನ್ನಲಾಗಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಇದು ಎನ್ನಲಾಗುತ್ತಿದೆ.

ಮಹಿಳಾ ಸಮಿತಿಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಕೈಗೊಂಡಿದೆ. ಸದ್ಯಕ್ಕೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸಂತ್ರಸ್ತೆಗೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಸಮಾಲೋಚನೆಯನ್ನು ಒದಗಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಸ್ತೂರಬಾ ನಗರದಲ್ಲಿ ಅಕ್ರಮ ಮದ್ಯ ಮಾರಾಟಗಾರರು 20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯ ತಲೆಗೆ ಹೊಡೆದು, ಆಕೆಯ ಮುಖಕ್ಕೆ ಕಪ್ಪು ಬಣ್ಣ ಬಳಿದು ಚಪ್ಪಲಿ ಹಾರ ಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶ ತಿಳಿದಿಲ್ಲ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಹೇಳಿದ್ದಾರೆ.

ಓರ್ವ ಬಾಲಕ ಈ ಯುವತಿಯನ್ನು ಹಿಂಬಾಲಿಸುತ್ತಿದ್ದ. ಆದರೆ ಆತ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ. ಬಾಲಕನ ಆತ್ಮಹತ್ಯೆಗೆ ಈಕೆಯೇ ಕಾರಣ ಎನ್ನುವ ಕಾರಣಕ್ಕೆ ಕುಟುಂಬದವರು ಈ ಹಲ್ಲೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಂತ್ರಸ್ತೆ ವಿವಾಹಿತೆಯಾಗಿದ್ದು, ಒಂದು ಮಗುವಿನ ತಾಯಿ. ಸದ್ಯ ಪ್ರಕರಣದ ಸತ್ಯಾಸತ್ಯತೆ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net