ಹಿಜಾಬ್​ ಬ್ಯಾನ್​: 10 ದಿನಗಳ ಬಿರುಸಿನ ವಾದ-ಪ್ರತಿವಾದಕ್ಕೆ ತೆರೆ; ತೀರ್ಪು ಕಾಯ್ದಿರಿಸಿದ ಸುಪ್ರೀಂ

hijab
Published on

ನವದೆಹಲಿ: ಶಾಲಾ ಮತ್ತು ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯ ವಾದ, ಪ್ರತಿವಾದಗಳು ಮುಗಿದಿದ್ದು, ತೀರ್ಪನ್ನು ಕೋರ್ಟ್​ ಕಾಯ್ದಿರಿಸಿದೆ.

10 ದಿನಗಳವರೆಗೆ ಸುದೀರ್ಘವಾಗಿ ವಾದ, ಪ್ರತಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್​ ನೇತೃತ್ವದ ಪೀಠವು, ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ವಿಚಾರಣೆಯಲ್ಲಿ ರಾಜ್ಯದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನಾವಡಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ವಾದ ಮಂಡಿಸಿದ್ದು, ಹಿರಿಯ ವಕೀಲರಾದ ದುಷ್ಯಂತ್ ದವೆ ಮತ್ತು ಸಲ್ಮಾನ್ ಖುರ್ಷಿದ್ ಮುಸ್ಲಿಂ ಅರ್ಜಿದಾರರ ಅಭಿಪ್ರಾಯಗಳನ್ನು ಮಂಡಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, 'ಸಂವಿಧಾನದ ಆರ್ಟಿಕಲ್ 25ರ ಪ್ರಸ್ತಾಪ ಮಾಡಿದರು. ಈ ಪರಿಚ್ಛೇದದ ಅಡಿ ಯಾವುದೇ ಧರ್ಮದ ಎಲ್ಲಾ ಧಾರ್ಮಿಕ ಆಚರಣೆಗಳನ್ನೂ ಮೂಲಭೂತ ಹಕ್ಕು ಎಂದು ಪರಿಗಣನೆ ಮಾಡಿಲ್ಲ, ಎಲ್ಲಾ ಆಚರಣೆಗಳಿಗೂ ಸಾಂವಿಧಾನಿಕ ರಕ್ಷಣೆ ಇಲ್ಲ' ಎಂದು ವಾದಿಸಿದರು. ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನೇ ಪ್ರಸ್ತಾಪಿಸಿದ ಅವರು, 'ತ್ರಿವಳಿ ತಲಾಖ್ ಹಾಗೂ ಗೋ ಹತ್ಯೆಯನ್ನು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಿಲ್ಲ. ಹೀಗಾಗಿ, ಇದೀಗ ಹಿಜಾಬ್ ಧಾರಣೆಯು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂದು ಸಾಬೀತು ಮಾಡಬೇಕಿದೆ. ಆಗ ಮಾತ್ರ ಸಂವಿಧಾನದ ಆರ್ಟಿಕಲ್ 25ರ ಅಡಿ ಹಿಜಾಬ್ ಧಾರಣೆಗೆ ಸಾಂವಿಧಾನಿಕ ರಕ್ಷಣೆ ಲಭ್ಯವಾಗುತ್ತದೆ' ಎಂದರು.

ಅದೇ ಇನ್ನೊಂದೆಡೆ, ಮುಸ್ಲಿಂ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ದುಷ್ಯಂತ್ ದವೆ, 'ನಂಬಿಕೆ ಇರುವವರಿಗೆ ಹಿಜಾಬ್ ಅತ್ಯಗತ್ಯ. ನಂಬಿಕೆಯಿಲ್ಲದವರಿಗೆ ಇದು ಅನಿವಾರ್ಯವಲ್ಲ' ಎಂದರು. 'ದುರದೃಷ್ಟವಶಾತ್ ನಾನು ಯಾವುದೇ ವ್ಯಕ್ತಿಯನ್ನು ಅಥವಾ ಯಾವುದನ್ನೂ ದೂಷಿಸುತ್ತಿಲ್ಲ, ಆದರೆ ಹಿಜಾಬ್​ ವಿರೋಧಿಸಿ ಆದೇಶಿಸಿರುವುದು, ಅಲ್ಪಸಂಖ್ಯಾತ ಸಮುದಾಯಗಳನ್ನು ಅಂಚಿನಲ್ಲಿಡುವ ಮಾದರಿಯಿದೆ ಎಂಬುದನ್ನು ತೋರಿಸುತ್ತವೆ' ಎಂದರು.

ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸುತ್ತಾ,‘ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಸಮವಸ್ತ್ರ ನೀತಿ ಜಾರಿಗೆ ತಂದಿದೆ. ಸಂವಿಧಾನದ ಆರ್ಟಿಕಲ್ 19ರ ಅಡಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳ ಹೊರಗೆ ನಾವು ಹಿಜಾಬ್ ನಿಷೇಧಿಸಿಲ್ಲ. ಶಾಲೆಗೆ ಬರುವ ವಾಹನಗಳಲ್ಲಿ ಹಿಜಾಬ್ ಧರಿಸಿ ಬರಬಹುದು. ಶಾಲೆಯ ಆವರಣದಲ್ಲಿ ಕೂಡಾ ಹಿಜಾಬ್ ಧಾರಣೆಗೆ ನಿಷೇಧವಿಲ್ಲ. ಕೇವಲ ತರಗತಿಯಲ್ಲಿ ಮಾತ್ರ ಹಿಜಾಬ್ ಧರಿಸಬಾರದು ಎಂದು ಹೇಳಲಾಗಿದೆ' ಎಂದು ಕೋರ್ಟ್​ಗೆ ಸ್ಪಷ್ಟಪಡಿಸಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು ತಮ್ಮ ವಾದ ಮಂಡಿಸುತ್ತಾ, ಕರ್ನಾಟಕ ಸರ್ಕಾರವನ್ನು ಸಮರ್ಥಿಸಿಕೊಂಡರು. ಹಿಜಾಬ್ ಮೇಲೆ ಯಾವುದೇ ನಿಷೇಧ ವಿಧಿಸಿಲ್ಲ. ಧರ್ಮ ನಿರಪೇಕ್ಷ ಸಮವಸ್ತ್ರವನ್ನು ಮಾತ್ರ ಶಿಫಾರಸು ಮಾಡಬೇಕೆಂದು ಸರ್ಕಾರ ಸೂಚಿಸಿದೆ. ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆ ನಿಷೇಧಿಸಿಲ್ಲ ಅಥವಾ ಪ್ರಚಾರ ಮಾಡಿಲ್ಲ" ಎಂದು ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net