

ನವದೆಹಲಿ: ಹೆಂಗಸು ಮನೆಯಲ್ಲಿ ಮಾಡುವ ಕೆಲಸದ ಬೆಲೆ ಆಫೀಸಿಗೆ ಹೋಗುವ ಗಂಡನ ಕೆಲಸಕ್ಕಿಂತ ಕಡಿಮೆ ಏನಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೌಸ್ವೈಫ್ಗಳು ದುಡಿಯುವುದಿಲ್ಲ ಅಥವಾ ಮನೆಗೆ ಆರ್ಥಿಕ ಕೊಡುಗೆ ನೀಡುವುದಿಲ್ಲ ಎಂಬ ಪರಿಕಲ್ಪನೆಯನ್ನು ತಿದ್ದಿಕೊಳ್ಳಬೇಕು ಎಂದಿದೆ, ನ್ಯಾಯಾಲಯ.
ಮಂಗಳವಾರ ಇತ್ಯರ್ಥಗೊಳಿಸಿದ ಅಪಘಾತ ಪ್ರಕರಣವೊಂದರಲ್ಲಿ ಸತ್ತ ಮಹಿಳೆಯ ಸಂಬಂಧಿಕರಿಗೆ ಸಲ್ಲಬೇಕಾದ ಪರಿಹಾರ ಮೊತ್ತವನ್ನು ಹೆಚ್ಚಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತ್ರತ್ವದ ತ್ರಿಸದಸ್ಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮಾನತೆಗಾಗಿ ಎಷ್ಟೇ ಹೋರಾಡಿದರೂ ಮನೆಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿಯುವ ಮಹಿಳೆಯರಿಗೆ ಸೂಕ್ತ ಮಾನ್ಯತೆ ಸಿಗದ ಇಂದಿನ ಪರಿಸ್ಥಿತಿಯಲ್ಲಿ ನ್ಯಾಯಾಲಯದ ಈ ಮಾತು ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿದೆ.
2014ರ ಏಪ್ರಿಲ್ನಲ್ಲಿ ನವದೆಹಲಿಯಲ್ಲಿ ಸ್ಕೂಟರ್ನಲ್ಲಿ ಪಯಣಿಸುತ್ತಿದ್ದ ದಂಪತಿಯು ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟರು. ಸತ್ತವರ ಸಂಬಂಧಿಕರಿಗೆ ನೀಡುವ ಪರಿಹಾರ ಮೊತ್ತವನ್ನು ನಿಗದಿ ಪಡಿಸುವಾಗ ದೆಹಲಿ ಉಚ್ಛ ನ್ಯಾಯಾಲಯವು ಮಹಿಳೆಯು ಹೌಸ್ವೈಫ್ ಎಂಬ ಕಾರಣಕ್ಕೆ ಅವಳ ಆದಾಯ ಪರಿಗಣನೆಯನ್ನು ಕಡಿಮೆ ಮಾಡಿ 11.20 ಲಕ್ಷ ರೂಪಾಯಿ ಪರಿಹಾರ ಆದೇಶಿಸಿತ್ತು. ಈ ನಿರ್ಣಯವನ್ನು ಬದಲಿಸಿದ ಸುಪ್ರೀಂ, ವಿಮಾ ಕಂಪೆನಿಯು ನೀಡಬೇಕಾದ ಪರಿಹಾರ ಮೊತ್ತವನ್ನು 33.20 ಲಕ್ಷ ರೂಪಾಯಿಗೆ ಹೆಚ್ಚಿಸಿತು.
ಈ ಕುರಿತು ಪ್ರತ್ಯೇಕ ಆದೇಶವೊಂದನ್ನು ನೀಡಿದ ನ್ಯಾಯಮೂರ್ತಿ ರಮಣ ಅವರು, ರಾಷ್ಟ್ರೀಯ ಅಂಕಿಸಂಖ್ಯೆ ಕಾರ್ಯಾಲಯದ 'ಟೈಮ್ ಯೂಸ್ ಇನ್ ಇಂಡಿಯಾ-2019' ಎಂಬ ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿದ್ದಾರೆ. ವರದಿಯಲ್ಲಿ ಮಹಿಳೆಯರು ಒಂದು ದಿನಕ್ಕೆ ಸರಿಸುಮಾರು 299 ನಿಮಿಷಗಳನ್ನು ತಮ್ಮ ಕುಟುಂಬದ ಸದಸ್ಯರಿಗಾಗಿ ಸಂಬಳವಿಲ್ಲದೆ ಗೃಹಸೇವೆಗಳನ್ನು ಮಾಡಲು ವ್ಯಯಿಸುತ್ತಾರೆ, ಅದೇ ಗಂಡಸರು ಬರೀ 97 ನಿಮಿಷಗಳನ್ನು ವ್ಯಯ ಮಾಡುತ್ತಾರೆ ಎಂದು ಹೇಳಲಾಗಿದೆ.
2011 ರ ಜನಗಣನೆಯ ಪ್ರಕಾರ ಭಾರತದಲ್ಲಿ 159.89 ಮಿಲಿಯನ್ ಮಹಿಳೆಯರು "ಮನೆ ಕೆಲಸ" ಮಾಡುತ್ತಾರೆ. "ಮಹಿಳೆಯು ಆಹಾರ ತಯಾರಿಸುತ್ತಾಳೆ, ದಿನಸಿಸಾಮಾನು ಇತರ ಖರೀದಿಗಳನ್ನು ನೋಡಿಕೊಳ್ಳುತ್ತಾಳೆ, ಮನೆಯನ್ನು - ಅದರ ಆವರಣವನ್ನು ಸ್ವಚ್ಛಗೊಳಿಸುತ್ತಾಳೆ, ಅಲಂಕರಿಸುತ್ತಾಳೆ, ರಿಪೇರಿ-ನಿರ್ವಹಣೆ ಮಾಡುತ್ತಾಳೆ ಮತ್ತು ಮಕ್ಕಳನ್ನು - ವಯಸ್ಸಾದವರನ್ನು ಆರೈಕೆ ಮಾಡುತ್ತಾಳೆ" ಎಂದು ವಿವರಿಸಿರುವ ನ್ಯಾಯಮೂರ್ತಿ ಎನ್.ವಿರಮಣ ಅವರು, "ಇಷ್ಟೆಲ್ಲ ಮಾಡಿದರೂ ಹೋಮ್ಮೇಕರ್ಗಳು ಕೆಲಸ ಮಾಡುವುದಿಲ್ಲ ಅಥವಾ ಮನೆಗೆ ಆರ್ಥಿಕವಾಗಿ ಕೊಡುಗೆ ನೀಡುವುದಿಲ್ಲ ಎಂಬ ಪರಿಕಲ್ಪನೆ ಇಟ್ಟುಕೊಂಡಿರುವುದು ಸಮಸ್ಯಾತ್ಮಕವಾಗಿದೆ. ಇದನ್ನು ನಿವಾರಿಸಬೇಕಿದೆ" ಎಂದಿದ್ದಾರೆ.