ನಾಟಿಕೋಳಿ ವಿವಾದ: ನಮ್​ ಮನೇಲಿ ಚಿಕನ್​ ತಿಂದೇ ಇಲ್ಲ ಎಂದ ಮಾಜಿ ಶಾಸಕಿ: ಆದ್ರೆ ಸಿದ್ದು ಹೇಳಿದ್ದೇ ಬೇರೆ...

siddu
Published on

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣದ ನಡುವೆಯೇ ಈಗ ಮಡಿಕೇರಿಯಲ್ಲಿ ಅವರು ನಾಟಿಕೋಳಿ ಸಾಂಬಾರ್​ ತಿಂದು ದೇವಾಲಯಕ್ಕೆ ಭೇಟಿ ಕೊಟ್ಟಿರುವ ವಿವಾದ ಶುರುವಾಗಿದೆ.

ನಾಟಿಕೋಳಿ ಸಾರು ತಿಂದು ಕೊಡಗಿನಲ್ಲಿ ದೇವಾಲಯಕ್ಕೆ ಸಿದ್ದರಾಮಯ್ಯನವರು ಭೇಟಿ ನೀಡಿರುವುದಾಗಿ ಹೇಳಲಾಗುತ್ತಿದೆ. ಮಡಿಕೇರಿಯ ಅತಿಥಿಗೃಹದಲ್ಲಿ ಕಳೆದ 18ನೇ ತಾರೀಖು ಮಧ್ಯಾಹ್ನ ಊಟ ಮಾಡಿದ್ದ ಸಿದ್ದರಾಮಯ್ಯನವರು ನಂತರ ಅಲ್ಲಿಂದ ದೇವಾಲಯಕ್ಕೆ ಭೇಟಿ ನೀಡಿದ್ದರು. ಅತಿಥಿ ಗೃಹದಲ್ಲಿ ಸಿದ್ದರಾಮಯ್ಯಗೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರಿಂದ ಊಟದ ವ್ಯವಸ್ಥೆ ಮಾಡಿಸಿದ್ದರು.

ಸಿದ್ದರಾಮಯ್ಯನವರಿಗೆ ಪ್ರೀತಿ ಎನ್ನುವ ಕಾರಣಕ್ಕೆ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಕಣಿಲೆ, ಅನ್ನ ತರಕಾರಿ ಸಾಂಬಾರಿನ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯನವರು ತಮ್ಮ ನೆಚ್ಚಿನ ನಾಟಿ ಕೋಳಿ ಸಾರನ್ನು ತಿಂದಿದ್ದರು. ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

ಇದು ವಿವಾದ ಸೃಷ್ಟಿಸುತ್ತಲೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯನಾನು ಸಿದ್ದರಾಮಯ್ಯನವರಿಗಾಗಿ ನಾಟಿಕೋಳಿನ ಸಾರು ಮಾಡಿಸಿದ್ದು ನಿಜ, ಅದು ಅವರಿಗೆ ತುಂಬಾ ಪ್ರೀತಿ ಎನ್ನುವ ಕಾರಣಕ್ಕೆ ಮಾಡಿಸಿದ್ದೆ. ಆದರೆ ಅವರು ಅದರ ಸೇವನೆ ಮಾಡಲಿಲ್ಲ, ತರಕಾರಿ ಸಾಂಬಾರು ಸೇವಿಸಿ ಹೋಗಿದ್ದರು ಎಂದಿದ್ದಾರೆ.

ಆದರೆ ಈ ಬಗ್ಗೆ ಖುದ್ದು ಸಿದ್ದರಾಮಯ್ಯನವರು ಹೇಳುತ್ತಿರುವುದೇ ಬೇರೆ. ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳುತ್ತಲೇ ಗರಂ ಆದ ಸಿದ್ದರಾಮಯ್ಯ, "ಏನಿಗ? ದೇವರು ಇಂಥದ್ದೇ ತಿನ್ನಬೇಕು ಅಂತ ಏನಾದ್ರೂ ಹೇಳಿದ್ದಾನಾ ಹೇಳ್ರಪ್ಪ ಎಂದು ಪ್ರಶ್ನಿಸಿದರು. ನೀವು ರಾತ್ರಿ ಮಾಂಸ ತಿಂದು ಬೆಳಗ್ಗೆ ಹೋಗ್ಬೋದಂತೆ, ಮಧ್ಯಾಹ್ನ ತಿಂದು ಸಂಜೆ ಹೋದ್ರೆ ತಪ್ಪೇನಯ್ಯಾ' ಎಂದು ಪ್ರಶ್ನಿಸಿದರು. ದೇವರು ಇದನ್ನು ತಿನ್ನು, ಇದನ್ನು ತಿನ್ಬೇಡ ಅಂತ ಏನಾದ್ರೂ ಹೇಳಿದ್ದಾನಾ? ಆ ಬಿಜೆಪಿಯವರಿಗೆ ಸುಮ್ಮನೇ ಮೊಸರಿನಲ್ಲಿ ಕಲ್ಲು ಹುಡುಕೋ ಕೆಲಸ. ಎಲ್ಲಿ ಚೆನ್ನಾಗಿದ್ಯೋ ಅಲ್ಲಿ ಬೆಂಕಿ ಹಾಕೋದು, ವಿಷ ಹಾಕೋದು ಕೆಲ್ಸ. ಈಗ ಇದನ್ನೇ ದೊಡ್ಡ ವಿವಾದ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net