

ಗೋರಖ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೋರಖ್ಪುರದ ಕೋರ್ಟ್ ಆವರಣದಲ್ಲಿ ಶನಿವಾರ (ಜ.22) ಭೀಕರ ಕೊಲೆಯೊಂದು ನಡೆದು ಹೋಯಿತು. ದಿಲ್ಶಾದ್ ಹುಸೇನ್ ಎಂಬ 35 ವರ್ಷದ ವ್ಯಕ್ತಿಯ ಕೊಲೆಯದು. ಈತನ ತಲೆ ಹೊಕ್ಕಿದ್ದು, ಸೇನೆಯ ನಿವೃತ್ತ ಅಧಿಕಾರಿಯೊಬ್ಬರ ಬಂದೂಕಿನಿಂದ ಹೊರಟ ಗುಂಡು.
ಈ ಘಟನೆ ನಡೆಯುತ್ತಿದ್ದಂತೆಯೇ ಇಡೀ ಕೋರ್ಟ್ ಆವರಣ ತಲ್ಲಣಗೊಂಡಿತು. ಈ ಕೊಲೆಯ ಸುದ್ದಿ ಮಿಂಚಿನಂತೆ ಎಲ್ಲೆಡೆ ಸುಳಿದಾಡಿತು. ಸೇನಾಧಿಕಾರಿ ಏಕೆ ಹೀಗೆ ಮಾಡಿದರು, ಅವರು ಉದ್ದೇಶವೇನು, ಏನು, ಎತ್ತ ತಿಳಿಯದವರು ಅರೆಕ್ಷಣ ಅವರನ್ನು ಅಪರಾಧಿಯನ್ನಾಗಿಸಿದ್ದು ನಿಜ. ಕಾನೂನಿನ ದೃಷ್ಟಿಯಲ್ಲಿ ಸದ್ಯ ಅವರು ಆರೋಪಿಯೂ ಹೌದು, ಸೂಕ್ತ ಸಾಕ್ಷ್ಯಾಧಾರಗಳಿಂದ ಕೊಲೆ ಆರೋಪ ಸಾಬೀತಾದರೆ ಅವರು ಅಪರಾಧಿಯೂ ಹೌದು.
ಆದರೆ ಜನರ ದೃಷ್ಟಿಯಲ್ಲಿ ಈ ಸೇನಾಧಿಕಾರಿ ರಾತ್ರೋರಾತ್ರಿ ಹೀರೋ ಆಗಿದ್ದಾರೆ. ಜಾಲತಾಣದ ತುಂಬೆಲ್ಲಾ ಅವರ ಪ್ರಶಂಸೆಗಳ ಸುರಿಮಳೆಯೇ ಶುರುವಾಗಿದೆ. ಶಿಕ್ಷೆ ನೀಡಬೇಕಾದವರು ನೀಡದೇ ಹೋದಾಗ, ಸಂತ್ರಸ್ತರು ಈ ರೀತಿ ಶಿಕ್ಷೆ ನೀಡುವಲ್ಲಿ ತಪ್ಪೇ ಇಲ್ಲ, ನಿಮಗಿದೋ ಸಲಾಂ ಎಂದು ಸೇನಾಧಿಕಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಆಗಿದ್ದೇನು?
ಕೊಲೆಯಾದ ದಿಲ್ಶಾದ್ ಹುಸೇನ್ ಈ ಸೇನಾಧಿಕಾರಿಯ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೋಗಿ ನಿರಂತರ ಅತ್ಯಾಚಾರ ಮಾಡಿದ್ದ. 17 ವರ್ಷದ ಪುತ್ರಿಯ ಸ್ನೇಹ ಬೆಳೆಸಿ, ಆಕೆಯನ್ನು ಮಾತಿನಲ್ಲಿ ಪುಸಲಾಯಿಸಿ ತನ್ನ ಜತೆ ಹೈದರಾಬಾದ್ಗೆ ಬಲವಂತವಾಗಿ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಅತ್ಯಾಚಾರ ಮಾಡುತ್ದ್ದತಿ. ಇತ್ತ ಮಗಳು ಕಾಣೆಯಾಗಿರುವ ಬಗ್ಗೆ ಸೇನಾಧಿಕಾರಿ ದೂರು ದಾಖಲಿಸಿದ್ದರು. ಕೊನೆಗೆ ಮಗಳನ್ನು ದಿಲ್ಶಾದ್ನ ಸುಪರ್ದಿಯಿಂದ ಬಿಡಿಸಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು. ಆಕೆ ತನಗಾಗಿರುವ ಚಿತ್ರಹಿಂಸೆಯನ್ನು ಪೊಲೀಸರ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಳು.
ಈ ವಿಷಯ ಕೋರ್ಟ್ ಮುಂದೆ ಬಂದಾಗ, ದಿಲ್ಶಾದ್ ಪರ ವಕೀಲರು, ದಿಲ್ಶಾದ್ ತುಂಬಾ ಕಡುಬಡತನ ಕುಟುಂಬದವ. ಕುಟುಂಬದ ಆಧಾರ ಈತ. ಈತ ಯಾವುದೇ ತಪ್ಪು ಮಾಡಲಿಲ್ಲ. ಘಟನೆಯಲ್ಲಿ ಅವನ ತಪ್ಪು ಏನೂ ಇಲ್ಲ. ಸೇನಾಧಿಕಾರಿಯ ಮಗಳು ಖುದ್ದು ಆತನ ಜತೆ ಹೋಗಿ ದೇಹ ಸಂಪರ್ಕ ಬೆಳೆಸಿದ್ದಾಳೆ. ಆದ್ದರಿಂದ ದಿಲ್ಶಾದ್ನಿಗೆ ಜಾಮೀನು ನೀಡಿ ಎಂದು ಕೇಳಿಕೊಂಡರು. ಕೋರ್ಟ್ ಈ ವಾದವನ್ನು ಮಾನ್ಯ ಮಾಡಿ ಜಾಮೀನು ನೀಡಿತು.
ಜಾಮೀನು ಪಡೆದು ಹೊರಕ್ಕೆ ಬಂದಿದ್ದ ದಿಲ್ಶಾದ್ ಸುಮ್ಮನೇ ಕುಳಿತುಕೊಂಡಿರಲಿಲ್ಲ. ಹಲವಾರು ಕೇಸ್ಗಳಲ್ಲಿ ಅದರಲ್ಲಿಯೂ ಅತ್ಯಾಚಾರದಂಥ ಕೇಸ್ಗಳಲ್ಲಿ ದೂರು ದಾಖಲು ಮಾಡಿದವರ ಮೇಲೆ ಜಾಮೀನು ಪಡೆದು ಹೊರಕ್ಕೆ ಬಂದ ಆರೋಪಿಗಳು ಯಾವ ರೀತಿ ಚಿತ್ರಹಿಂಸೆ ನೀಡುತ್ತಾರೋ ದಿಲ್ಶಾದ್ ಕೂಡ ಈ ಸೇನಾಧಿಕಾರಿ ಕುಟುಂಬಕ್ಕೆ ಹಾಗೆಯೇ ಮಾಡಿದ್ದ. ಹೊರಗೆ ಬಂದ ಮೇಲೂ ಮಗಳಿಗೆ ಹಿಂಸೆ ಕೊಡಲು ಶುರು ಮಾಡಿದ್ದ. ಈತನ ಚಿತ್ರಹಿಂಸೆಯನ್ನು ಸಹಿಸಿ ಸೇನಾಧಿಕಾರಿಗೆ ಸಾಕುಸಾಕಾಗಿ ಹೋಗಿತ್ತು. ಒಂದು ಕಡೆ ತಮ್ಮ ಮಗಳಿಗಾಗಿರುವ ಅನ್ಯಾಯ, ಇನ್ನೊಂದು ಕಡೆ ಸುಲಭದಲ್ಲಿ ಆತನಿಗೆ ಸಿಕ್ಕ ಜಾಮೀನು ಇದರಿಂದ ಸೇನಾಧಿಕಾರಿ ರೋಸಿ ಹೋಗಿದ್ದರು.
ಶನಿವಾರ (ಜ.22) ಮಧ್ಯಾಹ್ನ 1.30ರ ಸುಮಾರಿಗೆ ದಿಲ್ಶಾದ್ನನ್ನು ಕೋರ್ಟ್ಗೆ ಹಾಜರು ಪಡಿಸಬೇಕಿತ್ತು. ಆತ ಕೋರ್ಟ್ಗೆ ಬಂದಿದ್ದ. ವಕೀಲರ ಬರುವಿಕೆಗೆ ಕಾಯುತ್ತಿದ್ದ. ಆದರೆ ಅದಾಗಲೇ ಈತನಿಗೆ ಯಾವ ಗತಿ ಕಾಣಿಸಬೇಕು ಎಂದು ಸೇನಾಧಿಕಾರಿ ಪ್ಲ್ಯಾನ್ ಮಾಡಿ ಬಂದಿದ್ದರು. ತಾವು ತಂದಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಮೊದಲಿಗೆ ದಿಲ್ಶಾದ್ ಪ್ರಾಣ ಉಳಿಸಿಕೊಳ್ಳಲು ನ್ಯಾಯಾಲಯದ ಗೇಟ್ ಕಡೆಗೆ ಓಡಿದ್ದಾನೆ. ಆದರೆ ಪುನಃ ಗುಂಡು ಹಾರಿಸಿದಾಗ ಅದು ತಲೆಯ ಹಾದು ಹೋಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸೇನಾಧಿಕಾರಿಯನ್ನು ಸ್ಥಳೀಯರು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಬಳಿ ಇರುವ ಪರವಾನಗಿಯುಕ್ತ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ಕೇಸ್ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಆದರೆ ಅಪ್ರಾಪ್ತ ಮಗಳನ್ನು ಅಪಹರಿಸಿ ಹಿಂಸೆ ನೀಡಿ, ನಿರಂತರ ಅತ್ಯಾಚಾರ ಮಾಡಿ ಆಕೆಯ ಜೀವನವನ್ನು ನರಕ ಮಾಡಿದ ಈ ವ್ಯಕ್ತಿಯನ್ನು ಕೊಂದ ಸಂತೋಷದಲ್ಲಿ ಅಪ್ಪ ಇದ್ದರೆ, ಇವರು ಮಾಡಿದ್ದೇ ಸರಿ ಎಂದು ಜಾಲತಾಣದಲ್ಲಿ ಹೇಳಲಾಗುತ್ತಿದೆ. ಕೋರ್ಟ್ ಇಂಥ ಆರೋಪಿಗಳಿಗೆ ಜಾಮೀನು ನೀಡುವಾಗ ಸ್ವಲ್ಪ ಯೋಚನೆ ಮಾಡಬೇಕಾದ ಅಗತ್ಯವಿದೆ, ಏಕೆಂದರೆ ಇದೊಂದೇ ಪ್ರಕರಣವಲ್ಲ, ಇಂಥ ಸಹಸ್ರಾರು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬರುವ ಆರೋಪಿಗಳು ಸಂತ್ರಸ್ತರಿಗೆ ನೀಡುವ ಕಿರುಕುಳ ಅಷ್ಟಿಷ್ಟಲ್ಲ, ಆದರೆ ನಮ್ಮ ಕೋರ್ಟ್ಗಳು ಮಾತ್ರ ಜಾಮೀನು ನೀಡಿಬಿಡುತ್ತವೆ ಎಂದು ಹಲವರು ಕಮೆಂಟಿಗರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ನೀವು ಕಾನೂನಿನ ದೃಷ್ಟಿಯಲ್ಲಿ ಆರೋಪಿಯಾಗಿರಬಹುದು ಸರ್, ಅದು ಸಾಬೀತಾದರೆ ನಿಮಗೆ ಶಿಕ್ಷೆಯೂ ಆಗಬಹುದು, ಆದರೆ ನಮ್ಮೆಲ್ಲರ ದೃಷ್ಟಿಯಲ್ಲಿ ನೀವು ಹೀರೋ. ಒಬ್ಬ ಅಪ್ಪ ಮಾಡಬೇಕಾದ ಕೆಲಸ ಮಾಡಿದ್ದೀರಿ, ಇಂಥ ದುರುಳರನ್ನು ಅಲ್ಲಿಯೇ ಹೊಸಕಿ ಹಾಕಬೇಕು ಎಂದು ಹಲವಾರು ಮಂದಿ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಮಾತ್ರ ಕಾನೂನನ್ನು ಕೈಗೆತ್ತಿಕೊಂಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.