

ಮುಂಬೈ: ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ಇನ್ನು ಮುಂದೆ ಗಲ್ಲುಶಿಕ್ಷೆ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಸೂದೆ ರೂಪಿಸಲಾಗಿದ್ದು, ಅದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.
ಈ ಸಂಬಂಧ ಶಕ್ತಿ ಕಾಯ್ದೆ ಎನ್ನುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಯೋಜನೆ ರೂಪಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ಶಕ್ತಿ ಕಾಯ್ದೆ ಮಸೂದೆಯ ಕರಡನ್ನು ಕ್ಯಾಬಿನೆಟ್ ಅಂಗೀಕರಿಸಿದೆ. ಈ ಮಸೂದೆಯಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗುವುದು. ಅತ್ಯಾಚಾರದ ಗಂಭೀರತೆಯನ್ನು ಪರಿಗಣಿಸಿ ಒಂದು ವೇಳೆ ಗಲ್ಲುಶಿಕ್ಷೆ ಇಲ್ಲದಿದ್ದರೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುವುದು ಎಂದಿದ್ದಾರೆ.
ಮಾತ್ರವಲ್ಲದೇ ಆ್ಯಸಿಡ್ ದಾಳಿಗೆ ಒಳಗಾದರೆ ಸಂತ್ರಸ್ತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ. ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಚಿಕಿತ್ಸೆಗಾಗಿ 10 ಲಕ್ಷ ರೂ.ಗಳನ್ನು ನೀಡಲಾಗುವುದು.
ಶಕ್ತಿ ಕಾಯ್ದೆಯಲ್ಲಿ ಆರೋಪಿಗಳ ವಿಚಾರಣೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಈ ಕಾಯ್ದೆ ಅತ್ಯಾಚಾರ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲಾಗುವುದು ಮತ್ತು ಪೊಲೀಸರು 15 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಿಚಾರಣೆಯನ್ನು ಗರಿಷ್ಠ 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ ದೇಶ್ಮುಖ್.
ಮಹಾರಾಷ್ಟ್ರದ ಚಳಿಗಾಲದ ಅಧಿವೇಶನ ಡಿಸೆಂಬರ್ 14 ರಿಂದ ಆರಂಭವಾಗಲಿದ್ದು, ಆಗ ಈ ಮಸೂದೆಯನ್ನು ರಾಜ್ಯ ವಿಧಾನಸಭೆಯ ಮುಂದೆ ಇಡಲಾಗುವುದು. ವಿಧಾನಸಭೆಯ ಉಭಯ ಸದನಗಳಲ್ಲಿ ಚರ್ಚೆ ಮತ್ತು ಅನುಮೋದನೆಯ ನಂತರ ಅದನ್ನು ರಾಜ್ಯಪಾಲರ ಸಹಿಗಾಗಿ ಕಳುಹಿಸಲಾಗುವುದು. ಅಲ್ಲಿಂದ ಅನುಮೋದನೆ ಪಡೆದ ನಂತರ ಈ ಕಾನೂನನ್ನು 'ಶಕ್ತಿ ಆಕ್ಟ್' ಎಂದು ಕರೆಯಲಾಗುತ್ತದೆ.
ಸರ್ಕಾರದ ಈ ಮಹತ್ವದ ನಿರ್ಧಾರವು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ಅನಿಲ್ ದೇಶ್ಮುಖ್ ವಿವರಿಸಿದ್ದಾರೆ.