ಇರಾನ್​ನಲ್ಲಿ ಶಾಲೆ ಶುರು: ಮಕ್ಕಳು ಹೇಗೆ ಕುಳಿತಿದ್ದಾರೆ ನೋಡಿಯೊಮ್ಮೆ...

iran school
Published on

ಇರಾನ್​: ವಿಶ್ವಾದ್ಯಂತ ಕರೊನಾ ಹಾವಳಿ ಮುಂದುವರಿಯುತ್ತಿರುವ ಬೆನ್ನಲ್ಲೇ ಕರೊನಾದೊಂದಿಗೇ ಬದುಕಲು ಕಲಿಯಲು ಎಲ್ಲರೂ ಶುರುಮಾಡಿದ್ದಾರೆ. ಹಲವು ಕಡೆಗಳಲ್ಲಿ ಜೀವನ ಯಥಾಸ್ಥಿತಿಗೆ ಮರಳುತ್ತಲಿದೆ.

ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಮಾತ್ರ ಕರೊನಾ ಭಯ ಇರುವ ಹಿನ್ನೆಲೆಯಲ್ಲಿ, ಶಾಲಾ-ಕಾಲೇಜುಗಳನ್ನು ತೆರೆಯಬೇಕೋ, ಬೇಡವೋ ಎಂಬುದು ಇನ್ನೂ ಚರ್ಚಾಸ್ಪದವಾಗಿದೆಯೇ ಇದೆ. ಕೆಲವು ದೇಶಗಳಲ್ಲಿ ಶಾಲೆಗಳನ್ನು ತೆರೆದು ಕರೊನಾ ಹಾವಳಿ ಹೆಚ್ಚಾಗಿದ್ದರಿಂದ ಪುನಃ ಬಂದ್​ ಮಾಡಿರುವ ಘಟನೆಗಳೂ ನಡೆದಿವೆ.

ಸದ್ಯ ಕರ್ನಾಟಕದಲ್ಲಿ ಭಾಗಶಃ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಶಾಲೆಗಳ ಜತೆಗೆ ಪಾಲಕರಿಗೂ ತಳಮಳ ಆಗಿರುವುದಂತೂ ನಿಜ.

ಅದೇನೇ ಇರಲಿ. ಇರಾನ್​ನ ಕೆಲವು ಕಡೆಗಳಲ್ಲಿ ಶಾಲೆಗಳು ಆರಂಭವಾಗಿವೆ. ಕರೊನಾದಿಂದಾಗಿ ಏಳು ತಿಂಗಳ ಕಾಲ ಸ್ಥಗಿತಗೊಂಡಿದ್ದ ಶಾಲೆಗಳನ್ನು ಅಲ್ಲಿ ಆರಂಭಿಸಲಾಗಿದೆ. ಚಿಕ್ಕಮಕ್ಕಳಿಗೂ ಶಾಲೆ ಆರಂಭ ಮಾಡಲಾಗಿದ್ದು, ಅವರ ಸ್ಥಿತಿಯನ್ನು ವರ್ಣಿಸುವ ಚಿತ್ರವೊಂದು ಇದೀಗ ವೈರಲ್​ ಆಗಿದೆ. ‘

ಸೊಳ್ಳೆಪರದೆ ಮಾದರಿಯ ಪಾರದರ್ಶಕ ಡೇರೆಯೊಳಗೆ ಕುಳಿತಿರುವ ಮಕ್ಕಳು ಶಿಕ್ಷಕರ ಪಾಠವನ್ನು ಆಲಿಸುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈ ಡೇರೆಯೊಳಗೆ ಮಕ್ಕಳು ಕರೊನಾದಿಂದ ದೂರ ಇರಬಹುದು ಎನ್ನುತ್ತಿದೆ ಶಾಲೆಯ ಆಡಳಿತ ಮಂಡಳಿ. ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಆಗಲಾರದು ಎನ್ನುವುದು ಶಾಲೆಯ ಸ್ಪಷ್ಟನೆ.

ಈ ಫೋಟೋಗೆ ಪರ-ವಿರೋಧ ಎರಡೂ ವ್ಯಕ್ತವಾಗಿದೆ. ಕೆಲವರು ಶಾಲೆಗೆ ಭೇಷ್​ ಎಂದಿದ್ದರೆ, ಹಲವರು ಮಕ್ಕಳ ಮೇಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಇರಾನ್​ನಲ್ಲಿ ಇದುವರೆಗೆ 3.93 ಲಕ್ಷ ಮಂದಿಗೆ ಕರೊನಾ ಸೋಂಕು ತಗುಲಿದ್ದು, 3.39 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 22,669 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net