ಲಾಕ್‌ಡೌನ್‌ ಅವಧಿಯಲ್ಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ವಿವಾದ: ಸುಪ್ರೀಂ‌ಕೋರ್ಟ್‌ ಏನು ಹೇಳಿದೆ ನೋಡಿ...

SC-loan moritorum
Published on

ನವದೆಹಲಿ: ಕೋವಿಡ್‌ ಹಿನ್ನೆಲೆಯಲ್ಲಿ 2020ರ ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ಸಾಲಗಾರರು ಪಾವತಿ ಮಾಡಬೇಕಿದ್ದ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಈ ಅವಧಿಯಲ್ಲಿ ಯಾವುದೇ ಸಾಲಗಾರನಿಂದ ಚಕ್ರಬಡ್ಡಿಯನ್ನು ಬ್ಯಾಂಕ್‌ಗಳು ಪಡೆದುಕೊಂಡಿದ್ದರೆ, ಅವರಿಗೆ ಅದನ್ನು ಹಿಂದಿರುಗಿಸುವ ಬದಲು, ಅವರ ಮುಂದಿನ ಬಡ್ಡಿಯ ಕಂತಿನಲ್ಲಿ ಅದನ್ನು ಸರಿದೂಗಿಸುವಂತೆ ಕೋರ್ಟ್‌ ಹೇಳಿದೆ.

ಆದರೆ ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಣೆ ಮಾಡಲು (ಮೊರಟೋರಿಯಂ ಪಿರಿಯಡ್‌) ಸಾಧ್ಯವಿಲ್ಲ ಎಂಬ ಆರ್‌ಬಿಐ ಮಾತಿಗೆ ಕೋರ್ಟ್‌ ಸಮ್ಮತಿ ನೀಡಿದೆ. ಜತೆಗೆ, ಈ ಅವಧಿಯಲ್ಲಿನ ಚಕ್ರಬಡ್ಡಿಯ ಜತೆಗೆ, ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಹಲವಾರು ಸಾಲಗಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಲಾಕ್‌ಡೌನ್‌ನಿಂದಾಗಿ ಹಲವಾರು ಸಾಲಗಾರರು ತೊಂದರೆ ಅನುಭವಿಸಿದ್ದ ಹಿನ್ನೆಲೆಯಲ್ಲಿ, ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿ, 2020ರ ಮಾರ್ಚ್‌ 1 ರಿಂದ ಮೇ 31ರವರೆಗೆ ಸಾಲಗಾರರಿಂದ ಮಾಸಿಕ ಕಂತಿನ ಮರುಪಾವತಿಗೆ ಬೇಡಿಕೆ ಒಡ್ಡದಂತೆ ಸೂಚಿಸಿತ್ತು. ನಂತರ ಈ ಅವಧಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಣೆ ಮಾಡಿತ್ತು. ಆದರೆ ಈ ಅವಧಿಯಲ್ಲಿ ಯಾರ್ಯಾರು ಕಂತುಗಳನ್ನು ಕಟ್ಟಲಿಲ್ಲವೋ ಅವರಿಗೆ ಬಡ್ಡಿ ಮತ್ತು ಚಕ್ರಬಡ್ಡಿಯನ್ನು ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹಲವಾರು ಸಾಲಗಾರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರ ಮನವಿಯನ್ನು ಭಾಗಶಃ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್‌, ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಹೇಳಿದೆ. ಆದರೆ ಈ ಮೊರಿಟೋರಿಯಂ ಅವಧಿಯ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಿದರೆ ಕೇಂದ್ರದ ಬೊಕ್ಕಸಕ್ಕೆ ಆರು ಲಕ್ಷ ಕೋಟಿ ನಷ್ಟ ಆಗುವುದಾಗಿ ಕೇಂದ್ರ ಸರ್ಕಾರ ಮಾಡಿದ್ದ ವಾದವನ್ನು ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡು, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net