ಬೆಳಗಾವಿ: ರಾಜಕೀಯ ವಲಯದಲ್ಲಿಯೂ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ಮತ್ತು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರ ಪ್ರಕರಣಕ್ಕೀಗ ಭಾರಿ ಟ್ವಿಸ್ಟ್ ಸಿಕ್ಕಿದ್ದು, ಟಾಕಳೆ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರಿಗೀಗ ಬಂಧನದ ಭೀತಿ ಉಂಟಾಗಿದೆ.
ಹನಿಟ್ರ್ಯಾಪ್ ಎಂದೇ ಆರಂಭದಲ್ಲಿ ಬಿಂಬಿತವಾಗಿ ಕೊನೆಗೆ ಟಾಕಳೆಯೇ ನನ್ನ ಗಂಡ ಎಂದು ನವ್ಯಶ್ರೀ ಸ್ಫೋಟಕ ಹೇಳಿಕೆ ನೀಡುವ ಮೂಲಕ ಈ ಪ್ರಕರಣ ದಿನೇ ದಿನೇ ಕುತೂಹಲದ ತಿರುವು ಪಡೆದಿತ್ತು. ಈ ನಡುವೆ, ನವ್ಯಶ್ರೀ ಟಾಕಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅತ್ಯಾಚಾರ, ಅಪಹರಣ, ಗರ್ಭಪಾತ ಮಾಡಿಸಿದ್ದು, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ತರುವುದು ಮಾತ್ರವಲ್ಲದೆ ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿ, ಖಾಸಗಿತನಕ್ಕೆ ಧಕ್ಕೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಟಾಕಳೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ವಿರುದ್ಧ ಜುಲೈ 18ರಂದು ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್‍ಮೇಲ್ ಬಗ್ಗೆ ಉಲ್ಲೇಖಿಸಿದ್ದರು. ಇದಾದ ಬಳಿಕ ಜುಲೈ 23ರಂದು ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಪ್ರತಿ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿತ್ತು.
ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಟಾಕಳೆ ತಲೆಮರೆಸಿಕೊಂಡಿದ್ದರು. ತಮ್ಮನ್ನು ಪೊಲೀಸರು ಬಂಧಿಸುವ ಭೀತಿಯಿಂದ ಅವರು ಬಂಧಿಸಬಾರಂತೆ ಆದೇಶಿಸಲು ಕೋರಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅನಂತ್ ಎಚ್. ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.
ನವ್ಯಶ್ರೀ ವಿರುದ್ಧ ಟಾಕಳೆ ಹೇಳಿದ್ದೇನು?
ನವ್ಯಶ್ರೀ ವಿರುದ್ಧ ದೂರು ದಾಖಲಿಸಿದ್ದ ಟಾಕಳೆ, ‘2020ರಲ್ಲಿ ಬೆಂಗಳೂರಲ್ಲಿ ನನಗೆ ನವ್ಯಶ್ರೀ ಪರಿಚಯವಾದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನನಗೆ ಮದ್ವೆ ಆಗಿ ಮೂವರು ಮಕ್ಕಳಿದ್ದಾರೆ ಎಂಬುಗೆ ಆಕೆಗೆ ಗೊತ್ತಿದ್ದರೂ ಪ್ರೀತಿ ಪ್ರೇಮ ಅಂದಳು. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡು ನವ್ಯಶ್ರೀ ಮತ್ತು ಈಕೆಯ ಆಪ್ತ ತಿಲಕ್ ಇಬ್ಬರೂ ನನ್ನ ಬಳಿ ಹಣಕ್ಕಾಗಿ ಡಿಮಾಂಡ್ ಇಟ್ಟರು. 50 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ವಿಡಿಯೋವನ್ನು ನಿನ್ನ ಹೆಂಡ್ತಿಗೆ ಕಳುಹಿಸುವೆ ಎಂದು ಬೆದರಿಕೆ ಹಾಕಿದ್ದಾರೆ. ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ನನಗೆ ರಕ್ಷಣೆ ಕೊಡಿ’ ಎಂದು ದೂರಿನಲ್ಲಿ ವಿವರಿಸಿದ್ದರು.
ಇದರ ಬಗ್ಗೆ ದಿಗ್ವಿಜಯ ನ್ಯೂಸ್ ನವ್ಯಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅವರು, ‘ದಯವಿಟ್ಟು ನನಗೆ ಒಂದು ದಿನ ಕಾಲಾವಕಾಶ ಕೊಡಿ. ನಾನು 15 ದಿನದಿಂದ ಇಂಡಿಯಾದಲ್ಲಿ ಇರಲೇ ಇಲ್ಲ. ನಿನ್ನೆ ಮಾರ್ನಿಂಗ್ ಭಾರತಕ್ಕೆ ವಾಪಸ್ ಬಂದೆ. ಇಲ್ಲಿ ಏನೇನಾಗಿದೆ ಎಂದು ನಾನು ತಿಳಿದುಕೊಂಡು ಉತ್ತರಿಸುವೆ. ನನ್ನ ಕೈಯಲ್ಲಿ ಸಾಧ್ಯವಾದಷ್ಟು ಸಮಾಜಸೇವೆ ಮಾಡಿದ್ದೇನೆ. ಹನಿಟ್ರ್ಯಾಪ್ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾಗಿದೆ. ನನಗೆ ನನ್ನ ತಂದೆ-ತಾಯಿ ಒಳ್ಳೇ ಸಂಸ್ಕಾರ ಹೇಳಿಕೊಟ್ಟಿದ್ದಾರೆ. ನನಗೆ 2 ವರ್ಷದ ಹಿಂದೆ ಈ ಹಿಂದಿನ ಸರ್ಕಾರದಲ್ಲಿ ಸಚಿವರೊಬ್ಬರ ಆಪ್ತನಾಗಿದ್ದ ರಾಜಕುಮಾರ್ ಟಾಕಳೆ ಅವರ ಪರಿಚಯ ಆಗಿತ್ತು’ ಎಂದಷ್ಟೇ ಉಳಿದ ಪ್ರಶ್ನೆಗೆ ಉತ್ತರಿಸದೆ ಕರೆ ಸ್ಥಗಿತ ಮಾಡಿದ್ದರು. ಇದಾದ ಬೆನ್ನಲ್ಲೇ ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನವ್ಯಶ್ರೀ, ‘ರಾಜಕುಮಾರ್ ಟಾಕಳೆ ನನ್ನ ಗಂಡ’ ಎನ್ನುವ ಮೂಲಕ ಈ ಪಕ್ರರಣಕ್ಕೆ ಟ್ವಿಸ್ಟ್ ಕೊಟ್ಟಿದ್ದರು. (ದಿಗ್ವಿಜಯ ನ್ಯೂಸ್)
ಬೆಲ್ಟ್, ಕ್ಯಾಪ್ ತೆಗೆಸಿ ಆರೋಪಿಗಳ ಜತೆ ಪೊಲೀಸರನ್ನು ಕುಳ್ಳರಿಸಿದ ಕೋರ್ಟ್! ಏಕಿಂತ ಶಿಕ್ಷೆ ಅಂತೀರಾ?