ರಾಜೀನಾಮೆ ಕೊಡಲು ಸಿಂಗಪುರ ಆಯ್ದುಕೊಂಡ್ರಾ ಲಂಕಾಧ್ಯಕ್ಷ? ಮಾಲ್ಡೀವ್ಸ್‌ನಿಂದ ಹಾರಿದ ಗೋತಬಯ

rajapakse
Published on

ಕೋಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ತಿಕ್ಕಾಟದ ಮಧ್ಯೆ ಮಾಲ್ಡೀವ್ಸ್‌ಗೆ ಹಾರಿರುವ ಅಧ್ಯಕ್ಷ ಗೋತಬಯ ರಾಜಪಕ್ಸೆ ಇನ್ನೂ ರಾಜೀನಾಮೆ ನೀಡಲಿಲ್ಲ. ರಾಜೀನಾಮೆ ನೀಡಿ ಎಂದರೆ ಕುಟುಂಬ ಸಹಿತ ಮಾಲ್ಡೀವ್ಸ್ ಹೋಗಿದ್ದ ಗೋತಬಯ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಬದಲಿಗೆ ಸಿಂಗಪುರಕ್ಕೆ ಹೋಗಲು ರೆಡಿಯಾಗಿದ್ದು, ಇದಾಗಲೇ ಖಾಸಗಿ ಜೆಟ್​ ಮಾಲ್ಡೀವ್ಸ್ ತಲುಪಿದೆ.

ಬುಧವಾರ ರಾತ್ರಿಯೇ ರಾಜಪಕ್ಸೆ ಅವರ ಪತ್ನಿ ಐಯೋಮಾ ರಾಜಪಕ್ಸೆ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ವಿಮಾನದಲ್ಲಿ ಸಿಂಗಪುರಕ್ಕೆ ತೆರಳುವ ನಿರೀಕ್ಷೆಯಿತ್ತು, ಆದರೆ ಭದ್ರತಾ ಸಮಸ್ಯೆಗಳಿಂದಾಗಿ ವಿಮಾನ ಪ್ರಯಾಣವನ್ನು ಮುಂದೂಡಿದ್ದರು ಎಂದು ತಿಳಿದು ಬಂದಿದೆ. ಇದೀಗ ಖಾಸಗಿ ಜೆಟ್​ ಬಂದಿರುವ ಹಿನ್ನೆಲೆಯಲ್ಲಿ, ಸಿಂಗಪುರಕ್ಕೆ ಹೊರಟಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಂಗಪುರಕ್ಕೆ ಹೋದ ಮೇಲಾದರೂ ರಾಜಪಕ್ಸೆ ಅವರು ರಾಜೀನಾಮೆ ನೀಡುವರೆ ಎಂದು ಕಾದು ನೋಡಬೇಕಿದೆ. ಮಾಲ್ಡೀವ್ಸ್ ಸಂಸತ್ತಿನ ಸ್ಪೀಕರ್ ಮತ್ತು ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರು ದೇಶವನ್ನು ತೊರೆಯಲು ರಾಜಪಕ್ಸೆ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ, ಅಧ್ಯಕ್ಷನ ಪರಾರಿಯಿಂದಾಗಿ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದ ಹಿನ್ನೆಲೆಯಲ್ಲಿ ನಿನ್ನೆ (ಬುಧವಾರ) ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅದನ್ನು ಶುಕ್ರವಾರದವರೆಗೆ ವಿಸ್ತರಿಸಲಾಗಿದೆ.

ಶ್ರೀಲಂಕಾ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ಅಧ್ಯಕ್ಷ ಸ್ಥಾನದಿಂದ ರಾಜಪಕ್ಸೆಯನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿದೆ. ಜುಲೈ 20 ರಂದು ಸಂಸತ್ತಿನಲ್ಲಿ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ರಾಜಕೀಯ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಶ್ರೀಲಂಕಾದ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಹೇಳಿದ್ದಾರೆ. ಆದ್ದರಿಂದ ರಾಜೀನಾಮೆ ಘೋಷಿಸಲು ರಾಜಪಕ್ಸೆ ಸಿಂಗಪುರವನ್ನು ಆಯ್ಕೆ ಮಾಡಿಕೊಂಡಿದ್ದಾರೋ ಅಥವಾ ಇನ್ನೇನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net