ಅಪಘಾತದಲ್ಲಿ ಸತ್ತವನ ಡಿಎನ್‌ಎ ಆಯ್ತು ಮ್ಯಾಚ್‌- 10 ವರ್ಷಗಳ ಬಳಿಕ ಪ್ರತ್ಯಕ್ಷನಾದವ ಯಾರು?

railway
Published on

ಕೋಲ್ಕತಾ: 2010ರಲ್ಲಿ ನಡೆದ ಭೀಕರ ರೈಲು ಅ‍ಪಘಾತದಲ್ಲಿ ಮೃತಪಟ್ಟಿದ್ದ ಎನ್ನಲಾದ ವ್ಯಕ್ತಿಯೊಬ್ಬ ದಿಢೀರ್‌ ಪ್ರತ್ಯಕ್ಷನಾಗಿ ಈಗ ಭಾರಿ ಕೋಲಾಹಲ ಸೃಷ್ಟಿಸಿದ್ದಾನೆ.

ಪಶ್ಚಿಮಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲು ಡಿಕ್ಕಿ ಹೊಡೆದು 148 ಮಂದಿ ಮೃತಪಟ್ಟಿದ್ದರು. ಆಗ ಈ ಪ್ರದೇಶ ಮಾವೋವಾದಿಗಳ ಹಿಡಿತಕ್ಕೆ ಒಳಪಟ್ಟಿತ್ತು. ಈ ವಿಧ್ವಂಸಕ ಕೃತ್ಯವನ್ನು ಮಾವೋವಾದಿಗಳು ನಡೆಸಿದ್ದಾರೆ ಎನ್ನಲಾಗಿದೆ.

ಮೃತಪಟ್ಟವರಲ್ಲಿ ಅಮೃತವನ್‌ ಚೌಧರಿ ಕೂಡ ಒಬ್ಬರು ಎನ್ನಲಾಗಿತ್ತು. ಎಲ್ಲರ ಡಿಎನ್‌ಎ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಶವಗಳನ್ನು ನೀಡಲಾಗಿತ್ತು. ಅದೇ ರೀತಿ, ಚೌಧರಿ ಅವರ ಮೃತದೇಹ ಎನ್ನಲಾದ ಶವದ ಡಿಎನ್‌ಎ ಪರೀಕ್ಷೆ ಮಾಡಿ ಅವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಆ ವ್ಯಕ್ತಿಯ ಶವಸಂಸ್ಕಾರ ನಡೆದಿತ್ತು.

ಇದೀಗ ಘಟನೆ ನಡೆದು 11 ವರ್ಷಗಳ ಬಳಿಕ ಅಮೃತವನ್‌ ಚೌಧರಿ ಜೀವಂತ ಇರುವುದು ಪೊಲೀಸರಿಗೆ ತಿಳಿದಿದೆ. ಇದು ತಿಳಿಯುತ್ತಲೇ ಈ ವಿಷಯವನ್ನು ತನಿಖೆಗೆ ವಹಿಸಲಾಗಿದೆ. ಇದಕ್ಕೆ ಕಾರಣ ಎಂದರೆ, ಈ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಮಾತ್ರವಲ್ಲದೇ 27 ವರ್ಷದವರಾಗಿದ್ದ ಅಮೃತವನ್‌ ಅವರ ತಂಗಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಲಾಗಿದ್ದು, ಅವರು ಉನ್ನತ ಹುದ್ದೆಯಲ್ಲಿದ್ದಾರೆ.

ಡಿಎನ್‌ಎ ಪರೀಕ್ಷೆಯಲ್ಲಿ ಗೋಲ್‌ಮಾಲ್‌ ಆಗಿದ್ದು ಹೇಗೆ? ಈ ವ್ಯಕ್ತಿ 10 ವರ್ಷ ಎಲ್ಲಿದ್ದ? ಇದರ ಹಿಂದಿರುವ ಕೈವಾಡ ಯಾರದ್ದು? ಆತನ ತಂಗಿ ಮತ್ತು ತಂದೆಗೆ ಈ ವಿಷಯ ಗೊತ್ತಿರಲಿಲ್ಲವೆ ಅಥವಾ ಮೋಸ ಮಾಡಲಾಗಿದೆಯೆ ಎಂಬಿತ್ಯಾದಿಯಾಗಿ ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net