ಭಾರಿ ಪ್ರತಿಭಟನೆ ನಡುವೆಯೂ ನಡೆಯಿತು 50 ಗಂಟೆ ವಿಚಾರಣೆ- 5ನೇ ದಿನ ಊಟಕ್ಕೂ ಇಲ್ಲ ಬಿಡುವು- ಇವತ್ತೂ ಹಾಜರ್​!

rahul1
Published on

ನವದೆಹಲಿ: ನ್ಯಾಷನಲ್​ ಹೆರಾಲ್ಡ್​ನ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಐದು ದಿನಗಳವರೆಗೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿರುವ ಸಂಸದ ರಾಹುಲ್​ ಗಾಂಧಿ, ಇಂದು ಬುಧವಾರ ಆರನೆಯ ದಿನ ಹಾಜರು ಇದ್ದಾರೆ.

ಇಲ್ಲಿಯವರೆಗೆ 50 ಗಂಟೆಗಳಿಗೂ ಅಧಿಕ ಅವಧಿಯವರೆಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನಿನ್ನೆ )(ಮಂಗಳವಾರ) ಬೆಳಗ್ಗೆ ಇಡಿ ಮುಖ್ಯಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ​ ರಾತ್ರಿ 8 ಗಂಟೆಗೆ ಹೊರ ಬಂದಿದ್ದು, ಮಧ್ಯಾಹ್ನದ ಊಟದ ವಿರಾಮವನ್ನೂ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.

ಕೋಲ್ಕತ್ತಾದ ಡೋಟೆಕ್ಸ್ ಮರ್ಚಂಡೈಸ್ ಪ್ರೈ.ಲಿ. ಕಂಪೆನಿಯ ವಾಹಿವಾಟು ಸಂಬಂಧ ಕೂಡ ಇದೇ ವೇಳೆ ರಾಹುಲ್​ಗೆ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾರಿ ನಿರ್ದೇಶನಾಲಯ ನೋಟಿಸ್​ ನೀಡುತ್ತಲೇ ಕರೊನಾ ಸೋಂಕಿಗೆ ಗುರಿಯಾಗಿ ಆಸ್ಪತ್ರೆ ಸೇರಿದ್ದ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ (ಜೂನ್​ 20) ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ. ಇವರು ಇದೇ ಗುರುವಾರ ಅಂದರೆ ಜೂನ್​ 23ರಂದು ವಿಚಾರಣೆ ಎದುರಿಸಬೇಕಾಗಿದೆ. ಅವರಿಗೆ 23ರಂದು ಹಾಜರು ಇರುವಂತೆ ಇ.ಡಿ. ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಅದೇ ಇನ್ನೊಂದೆಡೆ ದೇಶದ ವಿವಿಧ ಭಾಗಗಳ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್​ ಪ್ರಶ್ನಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಅನೇಕ ಮುಖಂಡರು ಇದಾಗಲೇ ದೆಹಲಿ ತಲುಪಿದ್ದು, ಅಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 

ಏನಿದು ನ್ಯಾಷನಲ್​ ಹೆರಾಲ್ಡ್​ ಕೇಸ್​?
ಜವಾಹರಲಾಲ್ ನೆಹರು ಮತ್ತು ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.

2010ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದರು. ಈ ಕಂಪೆನಿಯು ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2 ಸಾವಿರ ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ರಾಹುಲ್​ ಮತ್ತು ಸೋನಿಯಾ ಅವರಿಗೆ ನೋಟಿಸ್​ ಜಾರಿ ಮಾಡಿ ಖುದ್ದು ಹಾಜರಿಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಕರೊನಾ ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net