

ನವದೆಹಲಿ: ನಿನ್ನೆಯಷ್ಟೇ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಬ್ಯಾಂಡ್ಮಿಂಟನ್ ತಾರೆ ಪಿ.ವಿ ಸಿಂಧು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಐಸ್‌ಕ್ರೀಂ ತಿನ್ನಲು ಉತ್ಸುಕರಾಗಿದ್ದಾರೆ!
ಈ ಮಾಹಿತಿಯನ್ನು ಸಿಂಧು ಅವರ ತಂದೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಸಿಂಧು ಅವರು ಪಂದ್ಯಕ್ಕೆ ಹೋಗುವ ಮುನ್ನ ಪ್ರಧಾನಿ ಮೋದಿ ಅವರ ಜತೆ ವಿಡಿಯೋ ಸಂವಾದದಲ್ಲಿ ಮಾತುಕತೆ ನಡೆಸಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿ ಆತಂಕ, ಒತ್ತಡವಿಲ್ಲದೆ ಉತ್ತಮ ಪ್ರದರ್ಶನ ನೀಡಲು ಸೂಚಿಸಿದ್ದರು.
ಸಿಂಧು ಅವರ ಜತೆ ಮಾತನಾಡುವ ವೇಳೆ ಮೋದಿಯವರು, ಸಿಂಧು ಅವರ ಬಳಿ ಡಯಟ್ ಕುರಿತು ಮಾಹಿತಿ ಪಡೆದಿದ್ದರು. ಆಗ ಸಿಂಧು ಐಸ್‌ಕ್ರೀಂ ಎಂದರೆ ನನಗೆ ಇಷ್ಟ. ಆದರೆ ಕಠಿಣ ಅಭ್ಯಾಸ, ಡಯಟ್ ಕಾರಣ ಅದನ್ನು ತಿನ್ನುತ್ತಿಲ್ಲ. ಐಸ್‌ಕ್ರೀಂ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಈ ವೇಳೆ ಪ್ರಧಾನಿ ಕ್ರೀಡಾಕೂಟದಿಂದ ವಾಪಸ್ ಬಂದಾಗ ಜತೆಯಾಗಿ ಐಸ್‌ಕ್ರೀಂ ಸೇವಿಸೋಣ ಎಂದಿದ್ದರು.
ಸಿಂಧು ಕಂಚಿನ ಪದಕ ಗೆಲ್ಲುತ್ತಿದ್ದಂತೆ ಸಿಂಧು ತಂದೆ ಪಿ.ವಿ ರಮಣಾ ಅವರು ಪ್ರಧಾನಿಯವರ ಮಾತನ್ನು ನೆನಪಿಸಿಕೊಂಡಿದ್ದಾರೆ. ಮಗಳು ವಾಪಸಾದ ಮೇಲೆ ದೆಹಲಿಗೆ ಪ್ರಧಾನಿಯವರ ಭೇಟಿಗಾಗಿ ಹೋಗುವುದಾಗಿ ಹೇಳಿದ್ದಾರೆ.
ಸಿಂಧು ಕಠಿಣ ಪರಿಶ್ರಮದಿಂದ ಜಯ ಸಿಕ್ಕಿದೆ. ಕೋಚ್ ಪುಲ್ಲೇಲ ಗೋಪಿಚಂದ್ ಅವರ ನಿರಂತರ ಮಾರ್ಗದರ್ಶದ ಜತೆಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವರು, ಕ್ರೀಡಾ ಇಲಾಖೆ ಸೇರಿದಂತೆ ಎಲ್ಲರ ಸಹಕಾರವಿದೆ ಎಂದಿದ್ದಾರೆ.