

ಕಲಬುರಗಿ: ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದು, ತನಿಖೆ ಶುರುವಾಗುತ್ತಲೇ ಎಸ್ಕೇಪ್ ಆಗಿದ್ದ ಅಭ್ಯರ್ಥಿ ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾನಾಯಕ ಇಬ್ಬರಿಗೂ ಕಲಬುರಗಿ ಕೋರ್ಟ್ ಜಾಮೀನು ನಿರಾಕರಿಸಿದೆ.
ಶಾಂತಿಬಾಯಿ, ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ ಮೇಳಕುಂದಿ ಅವರ ಅಭ್ಯರ್ಥಿಯಾಗಿದ್ದರು. ಮೇಳಕುಂದಿ ಸಹಾಯದಿಂದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‌ಐ ಪರೀಕ್ಷೆ ಬರೆದು ಶಾಂತಿಬಾಯಿ ಪಾಸಾಗಿದ್ದರು. ಅಕ್ರಮ ಹೊರಬರುತ್ತಿದ್ದಂತೆ ಪತಿ ಹಾಗೂ ಮಕ್ಕಳ ಜತೆ ತಲೆಮರೆಸಿಕೊಂಡಿದ್ದರು. ಇವರನ್ನು ಹೈದರಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಣ ನೀಡಿ ಒಎಮ್‌ಆರ್ ಶೀಟ್ನಲ್ಲಿ ನಕಲು ಮಾಡಿ ಪಿಎಸ್ಐನ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನೇಮಕವಾಗಿದ್ದರು ಎಂಬ ಆರೋಪದಡಿ ಇವರನ್ನು ಬಂಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತಮಗೆ ಜಾಮೀನು ನೀಡುವಂತೆ ಅವರು ಕಲಬುರಗಿಯ 3 ನೇ ಜೆಎಂಎಫ್‌ಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಿವಾಸ ಕೆ. ಅವರು ಜಾಮೀನು ನಿರಾಕರಿಸಿದ್ದಾರೆ.
545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಬೃಹತ್ ಅಕ್ರಮ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಜಾಮೀನು ಸಲ್ಲಿಸಿರುವ ಯಾರೊಬ್ಬರಿಗೂ ಜಾಮೀನು ಸಿಗಲಿಲ್ಲ.