

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ಪಂಚರಾಜ್ಯಗಳ ಚುನಾವಣೆ ಬಳಿಕ ಇದೀಗ ಎಲ್ಲರ ಕಣ್ಣು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ನೆಟ್ಟಿದೆ. ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಗೆಲ್ಲಲು ಭಾರಿ ಕಸರತ್ತು ನಡೆಸಿದೆ.
ಇದೇ ವೇಳೆ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕಾಂಗ್ಎಸ್ನ ಭವಿಷ್ಯವನ್ನು ಹೇಳಿದ್ದಾರೆ. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರು ಹೇಳಿದ್ದಾರೆ. ಇವರು ಹೇಳಿದ್ದು ಏನೆಂದರೆ, ಪಂಚರಾಜ್ಯಗಳಂತೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಕಾಂಗ್ರೆಸ್ಗೆ ಭಾರಿ ಸೋಲು ಎದುರಾಗಲಿದೆ ಎಂದು!
ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಬಲವರ್ಧನೆ ಹಾಗೂ ಮುಂದಿನ ಯೋಜನೆ ರೂಪಿಸಲು ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ 'ಚಿಂತನ್ ಶಿಬಿರ್' ನಡೆಸಿತ್ತು. ಈ ಬಗ್ಗೆ ಕಮೆಂಟ್ ಮಾಡಿರುವ ಪ್ರಶಾಂತ್ ಕಿಶೋರ್, ಈ ಶಿಬಿರದ ನಂತರ ಚುನಾವಣೆ ಫಲಿತಾಂಶದ ಕುರಿತು ಕಾಮೆಂಟ್ ಮಾಡಲು ನನ್ನನ್ನು ಪದೇ ಪದೇ ಕೇಳಲಾಗಿದೆ. ನನ್ನ ದೃಷ್ಟಿಯಲ್ಲಿ, ಯಥಾಸ್ಥಿತಿಯನ್ನು ವಿಸ್ತರಿಸುವುದು ಮತ್ತು ಕಾಂಗ್ರೆಸ್ ನಾಯಕತ್ವಕ್ಕೆ ಸ್ವಲ್ಪ ಸಮಯವನ್ನು ನೀಡುವುದನ್ನು ಹೊರತುಪಡಿಸಿ ಅರ್ಥಪೂರ್ಣವಾದ ಏನನ್ನೂ ಸಾಧಿಸಲು ವಿಫಲವಾಗಿದೆ. ಕನಿಷ್ಠ ಮುಂಬರುವ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಸೋಲಲಿದೆ ಎಂದು ಹೇಳಿದ್ದಾರೆ.
ಇದಾಗಲೇ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಕೆಲಸ ಮಾಡಿ ರಾಜಕೀಯ ತಂತ್ರಜ್ಱ ಎನಿಸಿಕೊಂಡಿರುವ ಪ್ರಶಾಂತ್ ಕಿಶೋರ್, ತಾವು ಕೆಲಸ ನಿರ್ವಹಿಸುತ್ತಿದ್ದ ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಗೆಲುವನ್ನು ತಂದುಕೊಟ್ಟವರು. ಇತ್ತೀಚೆಗೆ ಕಾಂಗ್ರೆಸ್ ಸೇರುವ ಪ್ರಸ್ತಾಪ ಅವರಿಗೆ ಬಂದಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು.