ಉ.ಪ್ರದೇಶದ ಸಿಎಂ ಖುರ್ಚಿ ಯಾರಿಗೆ? 2024ರ ಚುನಾವಣೆ ಭವಿಷ್ಯವೇನು? ಖ್ಯಾತ ಜ್ಯೋತಿರ್ವಿಜ್ಞಾನಿ ಅಮ್ಮಣ್ಣಾಯ ಹೇಳಿದ್ದು ಹೀಗೆ...

ammannaya
Published on

ಲಖನೌ: ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾವ ಪಕ್ಷ ಗೆಲ್ಲಲಿದೆ? ಯಾರು ಸಿಎಂ ಗದ್ದುಗೆ ಏರಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗುತ್ತವೆ. ಅದರ ಬೆನ್ನಲ್ಲೇ ಜ್ಯೋತಿಷಿಗಳು ಕೂಡ ಗ್ರಹಗಳ ಆಧಾರವಾಗಿಟ್ಟುಕೊಂಡು ಭವಿಷ್ಯ ನುಡಿಯುವುದೂ ಇದೆ.

ಈ ಹಿಂದೆ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ ಸೇರಿದಂತೆ ಹಲವಾರು ಮುಖಂಡರ ಹಾಗೂ ರಾಜ್ಯಗಳ ನಿಖರ ರಾಜಕೀಯ ಭವಿಷ್ಯದ ಜತೆಗೆ ನಟ ಅಂಬರೀಷ್‌ ಅವರಿಗಿದ್ದ ಕಂಟಕದ ಕುರಿತು ಮೊದಲೇ ನುಡಿದಿದ್ದ ಜ್ಯೋತಿರ್ವಿಜ್ಞಾನಿ ಪ್ರಕಾಶ್‌ ಅಮ್ಮಣ್ಣಾಯ ಅವರು ಇದೀಗ ಉತ್ತರ ಪ್ರದೇಶದ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅವರು ಬರಹ ಹಂಚಿಕೊಂಡಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಪೈಕಿ ಉತ್ತರ ಪ್ರದೇಶದ ಚುನಾವಣೆಯತ್ತ ದೇಶವಾಸಿಗಳ ಕಣ್ಣುನೆಟ್ಟಿರುವುದು ಸಹಜವೇ. ಇಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ನಡುವೆಯೇ ಕುತೂಹಲ ಎನ್ನುವಂಥ ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ ಅಮ್ಮಣ್ಣಾಯ.

‘ಆದಿತ್ಯನಾಥ್ ಯೋಗಿಗೆ ಚಂದ್ರ ಚತುರ್ಥದಲ್ಲಿ ನಿಪುಣ ಯೋಗ. ಯು. ಪಿ ಫಲಿತಾಂಶ ಬರುವಾಗ ಚಂದ್ರ ದಶಮದಲ್ಲಿ ನಿಪುಣ ಯೋಗ ( ಬುಧಾದಿತ್ಯ ಯೋಗ) ಅಂದರೆ ಮತ್ತೊಮ್ಮೆ ಯೋಗಿ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದರ್ಥ. ಕಡಿಮೆ ಎಂದರೂ 284 ಸ್ಥಾನ ಬರಲಿದೆ’ ಎಂದು ಅಮ್ಮಣ್ಣಾಯ ಅವರು ಹೇಳಿದ್ದಾರೆ. ಇದರ ಅರ್ಥ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಬರಲಿದೆ, ಯೋಗಿ ಆದಿತ್ಯನಾಥ ಅವರೇ ಮುಂದಿನ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಕಮೆಂಟ್‌ಗಳ ಸುರಿಮಳೆಯೇ ಬರುತ್ತಿದೆ.

ಇದರ ಫೇಸ್‌ಬುಕ್‌ ಲಿಂಕ್‌ ಇಲ್ಲಿದೆ: 

2024ರ ಲೋಕಸಭೆ ಭವಿಷ್ಯ:

ಅಮ್ಮಣ್ಣಾಯ ಅವರು ಕೆಲ ದಿನಗಳ ಹಿಂದೆ 2024ರ ಲೋಕಸಭಾ ಚುನಾವಣೆಯ ಬಗ್ಗೆಯೂ ಬರೆದುಕೊಂಡಿದ್ದರು. ಅದರಲ್ಲಿ ಅವರು, ’2024 ರ ಚುನಾವಣೆಯನ್ನು ಈಗಿನ ವಿದ್ಯಾಮಾನದಲ್ಲಿ ಲೆಕ್ಕಹಾಕಲಾಗದು.ಆಗಿನ ಗ್ರಹಸ್ಥಿತಿಯೇ ಮುಖ್ಯ. ಆ ವರೆಗಿನ ಪ್ರಧಾನಿ ಮೋದಿಯವರ ಜಾತಕದ ಪ್ರಕಾರ ಮತ್ತೊಮ್ಮೆ ಆಯ್ಕೆ ಖಚಿತವೆ.

ಏನೇ ತಂತ್ರಗಾರಿಕೆ ಮಾಡಿದರೂ ಸೋಲಿಸಲು ಕಷ್ಟವೆ. ಮೋದಿಯವರ ಲಗ್ನ ಮತ್ತು ಚಂದ್ರ ರಾಶಿ ವೃಶ್ಚಿಕ.ಈ ರಾಶಿಗೆ ಹನ್ನೊಂದನೆಯ ಮನೆಗೆ ಗುರುವಿನ ಪೂರ್ಣ ದೃಷ್ಟಿಯ ಕಾಲ ಇದು.ಹನ್ನೊಂದನೆಯ ಮನೆಯು ರಾಜ ಪೀಠ ಕಿರೀಟ ಭಾಗ.ಅಲ್ಲಿಗೆ ಗುರು ದೃಷ್ಟಿ ಇದ್ದಾಗ ಮತ್ತೊಮ್ಮೆ ಪ್ರಧಾನ ಮಂತ್ರಿ ಯೋಗ.ಒಂದು ವೇಳೆ ಲಗ್ನ ಮತ್ತು ಚಂದ್ರ ಅಥವಾ ಲಗ್ನಾಧಿಪತಿ ರಾಶ್ಯಾಧಿಪತಿ ಕುಜ ಬೇರೆ ಬೇರೆ ರಾಶಿಗತವಾಗಿದ್ದರೆ ಸ್ವಲ್ಪ ಯೋಚಿಸಬೇಕಿತ್ತು.ಆದರೆ ಮೋದಿಯವರ ಜಾತಕದಲ್ಲಿ ವೃಶ್ಚಿಕ ಲಗ್ನ,ವೃಶ್ಚಿಕ ರಾಶಿ,ವೃಶ್ಚಿಕ ಕುಜ ಇರುವುದರಿಂದ ಮತ್ತೊಮ್ಮೆ ಪ್ರಧಾನಿ ಯಾಗೋದು ಖಚಿತವೆ’ ಎಂದಿದ್ದಾರೆ.

ಇದರ ಫೇಸ್‌ಬುಕ್‌ ಲಿಂಕ್‌ ಇಲ್ಲಿದೆ:

ಇವರ ಈ ರಾಜಕೀಯ ಭವಿಷ್ಯ ಎಷ್ಟು ನಿಖರವಾಗಿ ಹೊರಹೊಮ್ಮಲಿದೆ ಎಂದು ಕಾಲವೇ ಉತ್ತರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net