ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ

marriage
Published on

ಟೆಕ್ಸಾಸ್: ಕರೊನಾ ವೈರಸ್‌ನಿಂದ ಜಗತ್ತೇ ಅಲ್ಲೋಲ ಕಲ್ಲೋಲವಾಗಿದೆ. ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ಕೆಲವು ವಿವಾಹಗಳು ರದ್ದು ಕೂಡ ಆಗಿವೆ. ಇನ್ನು ಕೆಲವು ಕಡೆಗಳಲ್ಲಿ ಸಾಧಾರಣ ಮದುವೆಯಾದ ವಧು-ವರರು ತಮ್ಮ ಅದ್ಧೂರಿ ಮದುವೆಯ ಕನಸನ್ನು ನುಚ್ಚುನೂರು ಮಾಡಿಕೊಂಡಿದ್ದಾರೆ. ಇನ್ನು ಹಲವೆಡೆ ಮದುವೆಗೆ ಹೋದವರು ಕರೊನಾ ಸೋಂಕಿಗೂ ಗುರಿಯಾಗಿರುವ ವರದಿಯಾಗಿವೆ.

ಇವೆಲ್ಲವುಗಳ ನಡುವೆ, ಇಲ್ಲೊಂದು ಮದುವೆ ಜಗತ್ತಿನ ಗಮನ ಸೆಳೆದಿದೆ. ಏಕೆಂದರೆ ಇದು ನಡೆದಿರುವುದು ಆಸ್ಪತ್ರೆಯಲ್ಲಿ, ಅದೂ ಕರೊನಾ ರೋಗಿಗಳು ಇರುವ ಆಸ್ಪತ್ರೆಯಲ್ಲಿ.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇಲ್ಲಿ ವರ ಕರೊನಾ ಪಾಸಿಟಿವ್‌, ವಧು ನೆಗೆಟಿವ್‌. ಅಂದರೆ ಕರೊನಾ ಸೋಂಕು ಪೀಡಿತ ಯುವಕನೊಬ್ಬ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿಯೇ ಮದುವೆಯಾಗಿದ್ದಾನೆ!

ಇಂಥದ್ದೊಂದು ಅಪರೂಪದ ಘಟನೆ ನಡೆದಿರುವುದು ಟೆಕ್ಸಾಸ್‌ನಲ್ಲಿ. ಕಾರ್ಲೊಸ್ ಮುನೀಜ್ ಎಂಬ ಯುವಕ ಕರೊನಾ ಸೋಂಕಿನಿಂದ ಬಳಲುತ್ತಿದ್ದು, ಇಲ್ಲಿನ ಸ್ಯಾನ್ ಅಂಟೋನಿಯೋಸ್ ಮೆತಾಡಿಸ್ಟ್ ಎಂಬ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈತನ ಮದುವೆ ಇಂದು ಫಿಕ್ಸ್‌ ಆಗಿತ್ತು. ಆದರೆ ಇದರ ನಡುವೆಯೇ ಕರೊನಾ ಅಂಟಿತು. ಆದರೆ ಮುಹೂರ್ತಕ್ಕೆ ಮದುವೆಯಾಗಲು ವಧು ಗ್ರೇಸ್‌ ಕೂಡ ಒಪ್ಪಿದಳು. ಕರೊನಾ ಆಕೆಗೆ ಅಡ್ಡಿಪಡಿಸಲೇ ಇಲ್ಲ. ಇದೇ ಕಾರಣಕ್ಕೆ ಆಸ್ಪತ್ರೆ ಹಾಸಿಗೆ ಮೇಲೆ ಮಲಗಿಯೇ ಇವರ ಮದುವೆ ನಡೆದಿದೆ. ಈ ಮದುವೆಗೆ ಇಬ್ಬರ ಕುಟುಂಬ ಸದಸ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸಾಕ್ಷಿಯಾಗಿದ್ದಾರೆ.

ಈ ಇಬ್ಬರ ನಡುವಿನ ಪ್ರೀತಿಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ಲೊಸ್ ಹಾಗೂ ಗ್ರೇಸ್ ಆಸ್ಪತ್ರೆಯಲ್ಲೇ ಮದುವೆಯಾಗುತ್ತಿರುವ ವಿಡಿಯೋವನ್ನು ಖುದ್ದು ಸ್ಯಾನ್ ಅಂಟೋನಿಯೋಸ್ ಮೆತಾಡಿಸ್ಟ್ ಆಸ್ಪತ್ರೆ ಹಂಚಿಕೊಂಡಿದೆ.

ಕರೊನಾ ರೋಗಿಗಳೆಂದರೆ ದೂರ ಸರಿಯುವ ಬಹುತೇಕ ಜನ ನಮ್ಮ ನಿಮ್ಮ ನಡುವೆಯೇ ಇದ್ದು, ಅಂಥದ್ದರಲ್ಲಿ ಕಾರ್ಲೊಸ್ ಹಾಗೂ ಗ್ರೇಸ್ ಆಸ್ಪತ್ರೆಯಲ್ಲೇ ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾಗಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net