

ಪಣಜಿ (ಗೋವಾ): ಗೋವಾದ ರಾಜಕೀಯದಲ್ಲೀಗ ಭಾರಿ ಕುತೂಹಲದ ಬೆಳವಣಿಗೆ ನಡೆದಿದೆ. ಪ್ರತಿಪಕ್ಷದ ನಾಯಕನನ್ನೇ ಕಾಂಗ್ರೆಸ್ ವಜಾ ಮಾಡಿದೆ! ಶಾಸಕ ಮೈಕೆಲ್ ಲೋಬೋ ಅವರೀಗ ವಜಾಗೊಂಡಿದ್ದಾರೆ. ಇದಕ್ಕೆ ಕಾರಣ ಇವರು ಬಿಜೆಪಿ ಜತೆ ಕೈಜೋಡಿಸುತ್ತಿದ್ದಾರೆ ಎನ್ನುವ ಗುಮಾನಿಯಿಂದ!
ಗೋವಾದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಶಾಸಕ ಮೈಕೆಲ್ ಲೋಬೋ ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಬಿಜೆಪಿ ಜೊತೆಗೆ ಕೈ ಜೋಡಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ. ಮಾತ್ರವಲ್ಲದೇ ಗೋವಾದಲ್ಲಿ ಕೆಲ ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರಲು ಮುಂದಾಗಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಇದಕ್ಕೆಲ್ಲಾ ಕಾರಣ, ಮೈಕೆಲ್ ಲೋಬೋ ಅವರೇ ಎಂಬ ಕಾರಣದಿಂದ ಅವರನ್ನು ವಜಾ ಮಾಡಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಗೋವಾದಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿಯು ಪ್ರತಿಪಕ್ಷವನ್ನು ಮುಗಿಸಲು ಬಯಸುತ್ತಿದೆ. ಕಾಂಗ್ರೆಸ್ ಪಕ್ಷ ದುರ್ಬಲವಾಗಲು ಮತ್ತು ಶಾಸಕರ ಪಕ್ಷಾಂತರಕ್ಕೆ ಬಿಜೆಪಿಯೊಂದಿಗೆ ನಮ್ಮದೇ ಕೆಲವು ನಾಯಕರು ಸಂಚು ರೂಪಿಸಿದ್ದಾರೆ. ಈ ಪಿತೂರಿಯ ನೇತೃತ್ವವನ್ನು ಕಾಂಗ್ರೆಸ್ ನಾಯಕರಾದ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ವಹಿಸಿದ್ದಾರೆ. ಈ ಇಬ್ಬರೂ ಬಿಜೆಪಿಯೊಂದಿಗೆ ಸಂಪೂರ್ಣ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಮತ್ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮೈಕೆಲ್ ಲೋಬೋ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮೋಸ ಮಾಡಲು ಮುಂದಾಗಿದ್ದರೆ, ದಿಗಂಬರ ಕಾಮತ್ ವಿರುದ್ಧ ಅನೇಕ ಕೇಸ್ಗಳು ಇದ್ದು, ಅದರಿಂದ ಬಚಾವ್ ಆಗಲು ಇಂಥ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಶಾಸಕರ ಪಕ್ಷಾಂತರ ವದಂತಿಗಳ ಮಧ್ಯೆಯೇ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಉಪಸ್ಪೀಕರ್ ಹುದ್ದೆ ನಡೆಯಬೇಕಿದ್ದ ಚುನಾವಣೆಯ ಅಧಿಸೂಚನೆಯನ್ನು ಭಾನುವಾರ ಬೆಳಗ್ಗೆ ಹಿಂಪಡೆದಿದ್ದಾರೆ. ಜುಲೈ 12ರಿಂದ ಮಳೆಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ.