

ಕರಾಚಿ: ಪಾಕಿಸ್ತಾನ ಎಂದರೆ ಸದಾ ಕೆಟ್ಟ ಸುದ್ದಿಗಳೇ ಬರುತ್ತವೆ. ಉಗ್ರರು ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಪಾಕಿಸ್ತಾನ. ಆದರೆ ಅಪರೂಪ ಎನ್ನುವಂತೆ ಪಾಕಿಸ್ತಾನದಿಂದ ಬಲು ಸಂತೋಷದಾಯಕ ವಿಷಯವೊಂದು ಹೊರಕ್ಕೆ ಬಂದಿದೆ.
ಅತ್ಯಾಚಾರಿಗಳ ಸಂಖ್ಯೆ ವಿಪರೀತ ಆಗಿರುವ ಪಾಕಿಸ್ತಾನದಲ್ಲೊಂದು ರೇಪಿಸ್ಟ್ಗಳು ಗಡಗಡ ನಡುವಂಥ ಕಾನೂನಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅದೇ ಅತ್ಯಾಚಾರಿಗಳ ಪುರುಷತ್ವವನ್ನೇ ಹರಣ ಮಾಡುವಂಥ ಕಾನೂನು ಇದು. ಅತ್ಯಾಚಾರಿಗಳ ‘ಕೆಮಿಕಲ್ ಕ್ಯಾಸ್ಟ್ರೇಷನ್’ಗೆ (ರಾಸಾಯನಿಕ ಬಳಸಿ ವೃಷಣಬೀಜ ಒಡೆಯುವುದು) ಅವಕಾಶ ಮಾಡಿಕೊಡುವ ಕಾನೂನಿಗೆ ಸಚಿವಸಂಪುಟ ಪ್ರಧಾನಿ ಇಮ್ರಾನ್ ಖಾನ್ ತಾತ್ವಿಕ ಒಪ್ಪಿಗೆ ನೀಡಿದ್ದರು. ಅದನ್ನೀಗ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮಾತ್ರವಲ್ಲದೇ ಅತ್ಯಾಚಾರ ಪ್ರಕರಣಗಳನ್ನು ನಡೆಸಲು ವಿಶೇಷ ಕೋರ್ಟ್ಗಳ ಸ್ಥಾಪನೆಗೂ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಈ ಎರಡು ವಿಷಯಗಳಲ್ಲೀಗ ಸದ್ಯ ಪಾಕಿಸ್ತಾನವನ್ನು ಎಲ್ಲ ರಾಷ್ಟ್ರಗಳು ಹೊಗಳುವಂತಾಗಿದೆ.
ಅತ್ಯಾಚಾರಿಯ ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ, ಆತ ಇನ್ನೆಂದೂ ಸೆಕ್ಸ್ ಮಾಡುವ ಸಾಹಸಕ್ಕೆ ಕೈಹಾಕದಂತೆ ಮಾಡಲಾಗುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದ ಅಪರಾಧಿ ಎಂದಿಗೂ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗುವುದಿಲ್ಲ. ನೈಜೇರಿಯಾದಲ್ಲಿ ಇದಾಗಲೇ ಇಂಥದ್ದೊಂದು ಕಾನೂನು ತರಲಾಗಿದೆ.