

ನವದೆಹಲಿ: ಕೆಲ ದಿನಗಳ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ’ಪದ್ಮ’ ಪ್ರಶಸ್ತಿ ನೀಡಲಾಯಿತು. ಅವರ ಪೈಕಿ ಗಮನ ಸೆಳೆದವರಲ್ಲಿ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಾಹೀರ್ ಕೂಡ ಒಬ್ಬರು. ಇವರ ಹೆಸರು ಪದ್ಮಶ್ರೀ ಪಟ್ಟಿಯಲ್ಲಿ ಇದ್ದಾಗ ಅಷ್ಟೇನೂ ಗಮನಿಸದ ಹಲವರು, ಇವರು ಪಾಕಿಸ್ತಾನದ ಮಾಜಿ ಯೋಧರಾಗಿದ್ದರು ಎಂದಾಗ ಹುಬ್ಬೇರಿಸಿದರು. ಪಾಕಿಸ್ತಾನದ ಯೋಧನಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯೆ? ಎಂದು ಪ್ರಶ್ನಿಸಿದವರೇ ಹಲವರು.
ಆದರೆ ಅಪರೂಪದಲ್ಲಿ ಅಪರೂಪ ರತ್ನಗಳನ್ನು ಹುಡುಕಿ ಪದ್ಮ ಪ್ರಶಸ್ತಿ ಕೊಡುತ್ತಿರುವ ಈ ಹೊತ್ತಿನಲ್ಲಿ ಪಾಕಿಸ್ತಾನದ ಯೋಧನೊಬ್ಬನಿಗೆ ಇಂಥ ಗೌರವ ಸಲ್ಲಿಸಿದ್ದು ಕೂಡ ಬಲು ಕುತೂಹಲವೇ.
ಖಾಜಿ ಸಜ್ಜದ್ ಅಲಿ ಜಾಹೀರ್ ಅಂತಿಂಥ ವ್ಯಕ್ತಿಯಲ್ಲ. 1971ರಲ್ಲಿನ ಬಾಂಗ್ಲಾದೇಶ ವಿಮೋಚನೆ ಯುದ್ಧ ಸಂದರ್ಭ ತಮ್ಮ ಪ್ರಾಣ ಒತ್ತೆ ಇರಿಸಿ, ಗಡಿ ದಾಟಿ ಬಂದು ಭಾರತಕ್ಕೆ ಬಂದು ನೆರವು ನೀಡಿದ್ದ ಮಹಾತ್ಮ ಇವರು. ಆದರೆ ಇಷ್ಟು ವರ್ಷಗಳವರೆಗೆ ಅವರ ಹೆಸರನ್ನು ಬಹಿರಂಗಗೊಳಿಸದೇ ಇರುವುದಕ್ಕೆ ಕಾರಣ ಮಿಲಿಟರಿ ಗೋಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ. ಈಗ ಅವರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ, ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರ ಕಥೆಯೇ ರೋಚಕ...
ಅದು 1971. ಆ ಸಮಯದಲ್ಲಿ ಖಾಜಿ ಸಜ್ಜದ್ ಅಲಿ ಜಾಹೀರ್ ಅವರಿಗೆ ಕೇವಲ 20 ವರ್ಷ. ಆ ಸಮಯದಲ್ಲಿ ಅವರು ಸಿಯಾಲ್ ಕೋಟ್‌ನಲ್ಲಿ ಪಾಕಿಸ್ತಾನದಿಂದ ಸೇನೆಯ ನಿಯೋಜಿತ ಸೈನಿಕರಾಗಿದ್ದರು. ಆಗ ಬಾಂಗ್ಲಾದೇಶವನ್ನು ಪೂರ್ವ ಪಾಕಿಸ್ತಾನ ಎಂದು ಗುರುತಿಸಲಾಗಿತ್ತು. ಆ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿತ್ತು. ಪಾಕಿಸ್ತಾನ ಸೇನೆ ಮಾಡುತ್ತಿದ್ದ ಹಿಂಸಾತ್ಮಕ ಕೃತ್ಯ, ಅವರು ನಡೆಸಿಕೊಳ್ಳುತ್ತಿದ್ದ ಕ್ರಮಗಳಿಂದ ಜಾಹೀರ್ ಅವರನ್ನು ತೀವ್ರವಾಗಿ ಕಾಡತೊಡಗಿತು.
ಆಗ ತಮ್ಮವರಿಗಾಗಿ ಏನಾದರೂ ಮಾಡಬೇಕೆಂದು ಜಾಹೀರ್ ಹವಣಿಸುತ್ತಿದ್ದರು. ಆದ್ದರಿಂದ ಪಾಕಿಸ್ತಾನದ ಮಿಲಿಟರಿಯ ಕ್ರೌರ್ಯಗಳಿಗೆ ಸೂಕ್ತ ದಾಖಲೆಗಳನ್ನು ಇವರು ಗುಟ್ಟಾಗಿ ಸಂಗ್ರಹಿಸಿದ್ದರು. ಭಾರತದ ಗಡಿ ನುಸುಳುತ್ತಿರುವ ಸಂದರ್ಭದಲ್ಲಿ ಪಠಾಣ್ ಕೋಟ್‌ನಲ್ಲಿ ಭಾರತೀಯ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು. ಆದರೆ ಅಸಲಿಗೆ ಅವರು ಭಾರತಕ್ಕೆ ದ್ರೋಹ ಎಸಗಲು ನುಸುಳಿರಲಿಲ್ಲ, ಬದಲಿಗೆ ನೆರವಿಗಾಗಿ ಭಾರತದ ಮೊರೆ ಹೋಗಿದ್ದಾರೆ ಎಂದು ತನಿಖೆಯಿಂದ ತಿಳಿಯಿತು.
ಪಾಕಿಸ್ತಾನದ ಗೂಢಚಾರ ಎಂದು ಅವರನ್ನು ಭಾರತೀಯ ಯೋಧರು ಬಂಧಿಸಿದ್ದರೂ ನಂತರ ಅವರಲ್ಲಿದ್ದ ದಾಖಲೆಯನ್ನು ಕಂಡು ನೆರವು ನೀಡಲು ಭಾರತ ಬಯಸಿತು. ನವದೆಹಲಿಯ ಸುರಕ್ಷಿತ ನಿವಾಸವೊಂದರಲ್ಲಿ ಅವರನ್ನು ಭಾರತೀಯ ಸೇನೆ ಗೋಪ್ಯವಾಗಿ ಇರಿಸಿತು. ನಂತರ ಅವರು ತಂದಿದ್ದ ದಾಖಲೆ ಗಮನಿಸಿದ ನಂತರ ಬಾಂಗ್ಲಾ ವಿಮೋಚನೆಗೆ ಭಾರತ ರಣತಂತ್ರ ಹೆಣೆಯಲು ನೆರವಾಯಿತು.
ಅತ್ತ ಪಾಕಿಸ್ತಾನದ ಸೇನೆ ಇವರನ್ನು ಹುಡುಕುತ್ತಿದ್ದರೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಬಾಂಗ್ಲಾ ದೇಶದ ಭಾಗಕ್ಕೆ ತೆರಳಿ ಅಲ್ಲಿನ ಸ್ಥಳೀಯ ಸೇನಾಪಡೆಯಾಗಿದ್ದ ಮುಕ್ತಿ ಬಾಹಿನಿಗೆ ಸಮರ ತರಬೇತಿ ನೀಡಿ ಪಾಕಿಸ್ತಾನ ಸೈನಿಕರ ವಿರುದ್ಧ ಜಾಹೀರ್ ರಣಕಹಳೆಯನ್ನೇ ಮೊಳಗಿಸಿದರು.
ತಮ್ಮ ದೇಶಕ್ಕೆ ಇವರು ದ್ರೋಹ ಮಾಡಿದ್ದಾರೆ ಎಂದು ಇವರಿಗೆ 50 ವರ್ಷಗಳ ಹಿಂದೆಯೇ ಮರಣದಂಡನೆ ವಿಧಿಸಿದೆ ಪಾಕಿಸ್ತಾನ ಮಿಲಿಟರಿ ಕೋರ್ಟ್. ಆದರೆ ಅವರು ಯಾರ ಕೈಗೂ ಸಿಗಲಿಲ್ಲ. ಈ ನಡುವೆಯೇ ಬಾಂಗ್ಲಾ ದೇಶ ಅವರಿಗೆ ಶೌರ್ಯ ಪದಕ ಹಾಗೂ ದೇಶದ ಅತ್ಯಂತ ಉನ್ನತ ನಾಗರಿಕ ಪುರಸ್ಕಾರವಾದ ' ಸ್ವಾಧಿನತಾ ಪದಕ್' ನೀಡಿ ಗೌರವಿಸಿದ್ದು, ಇದೀಗ ಭಾರತದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ತಮಗೆ ಭಾರತ ಸರ್ಕಾರ ಇಂಥ ಪ್ರಶಸ್ತಿ ನೀಡಿರುವುದನ್ನು ನೋಡಿ ಭಾವುಕರಾಗಿರುವ ಜಾಹೀರ್, ನಾನು ಮಾಡಿದ್ದು ಅಳಲುಸೇವೆಯಷ್ಟೇ. ಭಾರತ ಇಂದಿಗೂ ಅದನ್ನು ಗುರುತಿಸಿರುವುದು ತುಂಬಾ ಸಂತೋಷವಾಗಿದೆ. ನಾನು ಭಾರತದ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.