ಪತ್ನಿ ಡಿವೋರ್ಸ್​ಗೆ ಅರ್ಜಿ ಹಾಕಿದರೆ, ಮದುವೆಯ ಸಮಯದಲ್ಲಿ ಹಾಕಿದ್ದ ಒಡವೆ ಪತಿಗೆ ವಾಪಸ್​ ಸಿಗತ್ತಾ?

nyayadevate
Published on
ಪ್ರಶ್ನೆ: ನಮ್ಮ ಅಕ್ಕನ ಮಗಳನ್ನು ಮೂರು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದೆವು. ಅವಳಿಗೆ ಅ ಮದುವೆ ಇಷ್ಟವಿರಲಿಲ್ಲ. ತಂದೆ ತಾಯಿಯ ಬಲವಂತಕ್ಕೆ ಒಪ್ಪಿದ್ದಳು. ಒಂದು ವರ್ಷ ಮಾತ್ರ ಗಂಡನ ಮನೆಯಲ್ಲಿ ಇದ್ದಳು. ಈಗ ಎರಡು ವರ್ಷದಿಂದ ತವರಿನಲ್ಲಿಯೇ ಇದ್ದಾಳೆ. ಅವಳು ಈಗ ಗಂಡನ ಮನೆಗೆ ಹೋಗಲು ಒಪ್ಪುತ್ತಿಲ್ಲ. ಗಂಡನ ಮನೆಯವರೇ ವಿಚ್ಛೇದನ ಕೇಳಲಿ ಎಂದು ಇವರು ಸುಮ್ಮನಿದ್ದಾರೆ. ಈಗ ಪ್ರಶ್ನೆ ಏನೆಂದರೆ ಹುಡುಗಿಯೇ ಮೊದಲು ವಿಚ್ಛೇದನ ಕೇಳಿದರೆ ಹುಡುಗನಿಗೆ ಪರಿಹಾರ ಕೊಡಬೇಕಾಗುತ್ತಾ? ಹುಡುಗಿಯೇ ವಿಚ್ಛೇದನ ಕೇಳಿದರೆ ಮದುವೆಯ ಸಮಯದಲ್ಲಿ ಹಾಕಿದ್ದ ಒಡವೆಯನ್ನು ಹುಡುಗನ ಮನೆಯವರು ವಾಪಸ್ ಕೊಡದೇ ಉಳಿಸಿಕೊಳ್ಳಬಹುದಾ?

ಉತ್ತರ: ವಿಚ್ಛೇದನ ಯಾರು ಕೇಳಿದರು ಎನ್ನುವುದರ ಮೇಲೆ ಯಾವಾಗಲೂ ನ್ಯಾಯಾಲಯ ಪರಿಹಾರ ಕೊಡುವುದಿಲ್ಲ. ವಿಚ್ಛೇದನ ಕೊಡಲು ಕ್ರೂರತೆಯ ಅಂಶಗಳನ್ನು ನಿಮ್ಮ ಅಕ್ಕನ ಮಗಳು ನ್ಯಾಯಾಲಯದಲ್ಲಿ ಸಾಬೀತು ಪಡಿಸಿದರೆ ಆಗ ಆಕೆಗೆ ವಿಚ್ಛೇದನ ಸಿಗುತ್ತದೆ. ವಿಚ್ಛೇದನದ ಪ್ರಕರಣದಲ್ಲಿ ಕೆಲವೊಮ್ಮೆ ನ್ಯಾಯಾಲಯ ಆಲಿಮೊನಿ ಕೊಡುವ ಆದೇಶ ಮಾಡುತ್ತದೆ. ನಿಮ್ಮ ಅಕ್ಕನ ಮಗಳ ಗಂಡನಿಗೆ ಅವನದೆ ಆದ ಸಂಪಾದನೆ ಇದ್ದು, ಆತ ದೈಹಿಕವಾಗಿ ಮಾನಸಿಕವಾಗಿ ಸುಧೃಢನಾಗಿದ್ದರೆ ನಿಮ್ಮ ಅಕ್ಕನ ಮಗಳು ಆತನಿಗೆ ಏನೂ ಕೊಡುವ ಪ್ರಶ್ನೆ ಬರುವುದಿಲ್ಲ. ಆಕೆಗೆ ಸಂಪಾದನೆಯೇ ಇಲ್ಲದಿದ್ದರೂ ಕೊಡಬೇಕಾಗಿರುವುದಿಲ್ಲ. ಮದುವೆಯ ಸಮಯದಲ್ಲಿ ಕೊಟ್ಟಿದ್ದ ಒಡವೆಗಳನ್ನು ವಾಪಸ್ ಮಾಬೇಕು ಎನ್ನುವ ಅರ್ಜಿಯನ್ನೂ ಆಕೆ ನ್ಯಾಯಾಲಯದಲ್ಲಿ ಹಾಕಿದರೆ, ಸಾಕ್ಷಿ ಆಧಾರ ಪರಿಶೀಲಿಸಿ ಆದೇಶ ಮಾಡುತ್ತಾರೆ. ಆಕೆ ಹೆದರಬೇಕಾಗಿಲ್ಲ.

ನಿಮ್ಮ ಅಕ್ಕನ ಮಗಳು ಮೊದಲಿಗೆ ತಮ್ಮ ತಾಲ್ಲೂಕಿನ ಮಧ್ಯಸ್ಥಿಕಾ ಕೇಂದ್ರಕ್ಕೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಲಿ. ಅಲ್ಲಿ ಕೇಂದ್ರದವರು ನಿಮ್ಮ ಅಕ್ಕನ ಮಗಳ ಗಂಡನಿಗೆ ನೋಟಿಸು ಕೊಟ್ಟು ಅವರನ್ನು ಕರೆಸುತ್ತಾರೆ. ಮಧ್ಯಸ್ಥಿಕೆಗಾರರ ಮುಂದೆ ಕೂತು ಮಾತಾಡಿದಾಗ ಒಡವೆಯ ಬಗ್ಗೆ, ವಿಚ್ಛೇದನದ ಬಗ್ಗೆ ಒಂದು ಒಪ್ಪಂದಕ್ಕೆ ಬಂದರೆ ಇಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನದ ಪ್ರಕರಣ ದಾಖಲಿಸಬಹುದು.

ಹಾಗೆ ಮಾಡಿದರೆ 7-8 ತಿಂಗಳ ಒಳಗೆ ವಿಚ್ಛೇದನದ ಆದೇಶ ಸಿಗುತ್ತದೆ. ಒಬ್ಬರ ಮೇಲೆ ಒಬ್ಬರು ಯಾವ ಆರೋಪವನ್ನೂ ಹಾಕಬೇಕಿರುವುದಿಲ್ಲ. ಒಂದು ವೇಳೆ ರಾಜಿ ಸೂತ್ರಕ್ಕೆ ಅವರು ಒಪ್ಪದಿದ್ದರೆ ಅಗ ನಿಮ್ಮ ಅಕ್ಕನ ಮಗಳು ಧೈರ್ಯವಾಗಿ ಕ್ರೂರತೆಯ ಅಂಶಗಳ ಆಧಾರದ ಮೇಲೆ ಪ್ರಕರಣ ದಾಖಲಿಸಬಹುದು. ವಿಚ್ಛೇದನ ಕೇಳಿದರು ಎನ್ನುವ ಕಾರಣಕ್ಕೆ ಮಾತ್ರ ನ್ಯಾಯಾಲಯ , ಕೇಳಿದವರ ವಿರುದ್ಧ ಪರಿಹಾರ ಕೊಡಿ ಎನ್ನುವ ಆದೇಶ ಮಾಡುವುದಿಲ್ಲ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net