ಮೈಸೂರು ಟ್ರಿಪ್​ ಪ್ಲ್ಯಾನ್​ ಮಾಡಿದ್ರೆ ಸದ್ಯ ರದ್ದು ಮಾಡಿ: ಮೂರು ದಿನ ಅರಮನೆಗೆ ನೋ ಎಂಟ್ರಿ

palace
Published on

ಮೈಸೂರು: ವೀಕೆಂಡ್​ ಬಂತೆಂದರೆ ಟ್ರಿಪ್​, ಪಿಕ್​ನಿಕ್​ ಪ್ಲ್ಯಾನ್​ ಮಾಡೋದು ಸಹಜ. ಆದರೆ ಈ ಬಾರಿ ಮೈಸೂರಿಗೆ ಏನಾದ್ರೂ ಹೋಗುವ ನಿರ್ಧಾರ ಮಾಡಿದ್ದರೆ ಅದನ್ನು ಸ್ವಲ್ಪ ದಿನ ಮುಂದೂಡಿ. ಏಕೆಂದರೆ ಮೂರು ದಿನ ಅರಮನೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ನಾಳೆ ಭಾನುವಾರದಿಂದ (ಜೂನ್​ 19) ಮೂರು ದಿನ ಎಂದರೆ 21ರವರೆಗೆ ಮೈಸೂರು ಅರಮನೆಗೆ ನಿರ್ಬಂಧ ವಿಧಿಸಲಾಗಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವುದು. ಆದ್ದರಿಂದ ಜೂನ್ 19ರಿಂದ 21ರವರೆಗೆ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಅಥವಾ ಮೈಸೂರು ಅರಮನೆಗೆ ಯಾವುದೇ ಪ್ರವಾಸಿಗರಿಗೆ ಒಳಗಡೆ ಪ್ರವೇಶ ಇರುವುದಿಲ್ಲ.

ಜೂನ್ 21ರಂದು ವಿಶ್ವದ ಎಲ್ಲೆಡೆ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹೀಗಾಗಿ ಅರಮನೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಬಾರಿ ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಪೂರ್ವ ಸಿದ್ಧತೆ ಕೈಗೊಳ್ಳಬೇಕಿರುವುದರಿಂದಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಶುಕ್ರವಾರದಿಂದ ಜೂನ್ 22ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.

ಕಾರ್ಯಕ್ರಮದ ನಂತರ ಮೈಸೂರು ಅರಮನೆಗೆ ಪ್ರಧಾನಿ ಭೇಟಿ ಕೊಡಲಿದ್ದಾರೆ. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನ‌ದ ಮೇರೆಗೆ ಪ್ರಧಾನಿ ಮೋದಿ ಅರಮನೆಗೆ ಭೇಟಿ ನೀಡಲಿದ್ದಾರೆ. ಸುಮಾರು ಒಂದು ಗಂಟೆಗಳ‌ ಕಾಲ ಅರಮನೆಯಲ್ಲಿ ರಾಜ ವಂಶಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net