

ಸೌರಾಷ್ಟ್ರ (ಗುಜರಾತ್): 1948ರ ಜನವರಿ 20ರಂದು ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದನು. ಈ ಹತ್ಯೆಗೆ ಸಂಬಂಧಿಸಿದಂತೆ ಅಂದಿನಿಂದ ಇಂದಿನವರೆಗೂ ಪರ- ವಿರೋಧ ನಿಲುವುಗಳು ಹರಿದಾಡುತ್ತಲೇ ಬಂದಿವೆ. ಹತ್ಯೆ ಮಾಡಿರುವುದು ಮಹಾಪಾಪ ಎಂದು ಒಂದು ವರ್ಗ ಎಂದಿದ್ದರೆ, ಗೋಡ್ಸೆ ಪರವಾಗಿ ನಿಂತಿದೆ ಇನ್ನೊಂದು ವರ್ಗ.
ಈಗ ನಾಥೂರಾಮ್ ಗೋಡ್ಸೆಯ ಪರವಾಗಿ ಇರುವ ಕೆಲವು ಯುವಕರು ಆತನ ಪ್ರತಿಮೆಯನ್ನು ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಗುಜರಾತ್ ಮೂಲದ ಹಿಂದೂ ಸೇನೆ ಎಂಬ ಹೆಸರಿನ ಸಂಘಟನೆ ಈ ವಿಷಯವನ್ನು ತಿಳಿಸಿದೆ. ‘ಯುವಕರಲ್ಲಿ ರಾಷ್ಟ್ರೀಯತೆಯ ಭಾವವನ್ನು ವೃದ್ಧಿಸುವ ಉದ್ದೇಶದಿಂದ ಗೋಡ್ಸೆ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು. ಗೋಡ್ಸೆಯವರನ್ನು ಗಲ್ಲಿಗೇರಿಸಿದ ದಿನ ಅಂದರೆ ನವೆಂಬರ್ 15ರಂದು ಅವರ ಪ್ರತಿಮೆ ಸ್ಥಾಪನೆ ಮಾಡಲಾಗುವುದು’ ಎಂದು ಸಂಘಟನೆಯ ಅಧ್ಯಕ್ಷ ಪ್ರತೀಕ್ ಭಟ್ ತಿಳಿಸಿದ್ದಾರೆ.
ಗುಜರಾತ್ನ ಸೌರಾಷ್ಟ್ರದ ಜಮ್ನಾನಗರದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಇಂದಿನ ಯುವಕರಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಈ ಬಲವನ್ನು ಚಲಾಯಿಸುವ ಮಾರ್ಗದರ್ಶಕ ವ್ಯಕ್ತಿಗಳಿಲ್ಲ. ಗೋಡ್ಸೆ ಅವರ ಬದುಕಿನ ಬಗ್ಗೆ ಸಾಕಷ್ಟು ವಿರುದ್ಧ ಮಾಹಿತಿಗಳೇ ಜನಸಾಮಾನ್ಯರಲ್ಲಿ ತುಂಬಿ ತುಳುಕಾಡುತ್ತಿದೆ. ಆದರೆ ಗೋಡ್ಸೆ ಅವರ ಚಿಂತನೆಗಳನ್ನು ಯುವಕರಿಗೆ ಧಾರೆಯೆರೆಯಬೇಕಿದೆ. ಅವರ ಜೀವನದ ಬಗ್ಗೆ ಸತ್ಯಾಂಶವನ್ನು ತಿಳಿಸುವುದು ಇದರ ಉದ್ದೇಶ ಎಂದು ಪ್ರತೀಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಯುವಕರ ಹೃದಯದಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬುವುದು ನಮ್ಮ ಉದ್ದೇಶ. ದ್ವಾರಕಾಧೀಶ್ ಮಂದಿರದಲ್ಲಿ ನಡೆಸಲಾದ ಸಭೆಯಲ್ಲಿ ಇವರ ಪ್ರತಿಮೆ ಸ್ಥಾಪಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ 30 ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.