

ಅವರ ಮನೆಯಲ್ಲಿ ನಡೆದ ಪ್ರಸಂಗ ಹೀಗಿದೆ. ಮಗನಿಗೆ ಮದುವೆಯಾಯಿತು. ಸೊಸೆ ಮನೆಗೆ ಬಂದು ನಾಲ್ಕು ದಿನವಾಗಿತ್ತು. ಮರುದಿನ ಅವರಿಬ್ಬರೂ ಒಂದು ತಿಂಗಳ ಕಾಲ ಪರದೇಶಕ್ಕೆ ಹೋಗುವವರಿದ್ದರು. ಅಂದು ಶುಕ್ರವಾರ ಸಂಜೆ ದೀಪಹಚ್ಚುವ ಸಮಯ. ಹೊರಗೆ ಹೋದ ಮಗಸೊಸೆ ಮನೆಗೆ ಬಂದಾಗ ಸೊಸೆ ಸಂಪೂರ್ಣವಾಗಿ ತನ್ನ ಕೂದಲನ್ನು ಬಾಯ್ಕಟ್ ಮಾಡಿಸಿಕೊಂಡಿದ್ದಳು. ಅವರಿಬ್ಬರ ಪ್ರವಾಸಕ್ಕೆಂದು ತಿಂಡಿ ಮಾಡುತ್ತಿದ್ದ ಅತ್ತೆ ಅಡುಗೆ ಮನೆಯಲ್ಲಿದ್ದರು. ಸೊಸೆಯನ್ನು ನೋಡಿದ ಮಾವ ಕಂಗಾಲಾಗಿ " ಇದೇನಮ್ಮ ಮದುವೆಯಾಗಿ ನಾಲ್ಕುದಿನವಾಗಿಲ್ಲ ಹೀಗೆ ಕೂದಲನ್ನು ಕತ್ತರಿಸಿಕೊಂಡಿದ್ದೀಯಾ? ಅದಲ್ಲದೇ ಶುಕ್ರವಾರ ಸಂಜೆ ಹೊತ್ತು " ಎಂದು ಉದ್ಗರಿಸಿದರು.
ತಕ್ಷಣ ಸೊಸೆ " ನನ್ನ ಕೂದಲು ನನ್ನಿಷ್ಟ ನಿಮಗೇನಾಯಿತು? ಇದರಿಂದ ನಿಮಗೇನು ಕಷ್ಟ"? ಎಂದು ಸಿಡುಕಿ ತನ್ನ ರೂಮಿಗೆ ಹೋದಳು. ಆ ಹೊತ್ತಿಗೆ ಈ ವಾದ ಕೇಳಿದ ತಾಯಿ ಹೊರಬಂದವರು ಸೋಫ಼ಾ ಮೇಲೆ ಕೂತಿದ್ದ ಮಗನ ಮುಖ ನೋಡಿದರು. ತಕ್ಷಣ ಮಗ ಹೇಳಿದ " ಅಮ್ಮ ದಯವಿಟ್ಟು ಇದರಲ್ಲಿ ನನ್ನನ್ನು ಎಳೆಯ ಬೇಡಿ. ಅವಳು ನನಗೆ ಹೇಗೆ ಹೆಂಡತಿಯೋ ಹಾಗೇ ನಿಮಗೆ ಸೊಸೆ. ನಿಮ್ಮಿಬ್ಬರ ಸಂಬಂಧದಲ್ಲಿ ನಾನು ಮಧ್ಯೆ ಬರುವುದಿಲ್ಲ. ನೀನು ನೀವೇ ಸರಿಮಾಡಿಕೊಳ್ಳಿ" ಎಂದವನೇ ಎದ್ದು ಒಳಗೆ ರೂಮಿನಲ್ಲಿ ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಮಾಡಲು ಒಳಗೆ ಹೊರಟುಹೋದ!ನಿಜ ಸಂಪ್ರದಾಯಸ್ಥರಿಗೆ ಇವೆಲ್ಲಾ ಅಪವಿತ್ರಕಾರ್ಯಗಳೇ. ಆದರೆ ನಾವು ನಂಬಿದ ಸಂಪ್ರದಾಯವನ್ನು ನಮ್ಮ ಮಗ ಮತ್ತು ಸೊಸೆಯೂ ಪಾಲಿಸಲೇ ಬೇಕು ಎನ್ನುವ ಬಲವಾದ ನಂಬಿಕೆ ಈ ದಿನಗಳಲ್ಲಿ ಸಡಿಲ ಗೊಳ್ಳಲೇ ಬೇಕಾಗಿದೆ. ಅವರು ಆ ಕ್ಷಣ ಸುಮ್ಮನಿದ್ದು ಒಳಗೆ ಹೆಂಡತಿಯ ಹತ್ತಿರ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ಅತ್ತೆಯಾದರು ನಿಧಾನವಾಗಿ ಸೊಸೆಯ ಹತ್ತಿರ ಈ ಬಗ್ಗೆ ಅವಳ ಅಭಿಪ್ರಾಯವನ್ನೂ ಕೇಳಬಹುದಿತ್ತು. ಈ ಕೆಲಸಕ್ಕೆ ತಮ್ಮ ಮಗನೂ ಕೈ ಜೋಡಿಸಿದ್ದಾನೆ ಎನ್ನುವ ಸತ್ಯವನ್ನೂ ಅರಿಯಬೇಕಾಗಿತ್ತು. ಸೊಸೆಯನ್ನು ಕೇಳುವ ಬದಲು ಮಗನನ್ನು ಈ ಬಗ್ಗೆ ಕೇಳಬಹುದಿತ್ತು. ಎಲ್ಲವೂ ’ ಮಾಡಬಹುದಿತ್ತು ’ ಅಷ್ಟೇ ಮಾಡಿಲ್ಲ. ಮಾತು ಉದುರಿದೆ ನೆಂಟಸ್ಥಿಕೆಯೆಂಬ ಮುತ್ತು ಒಡೆದಿದೆ. ಇಲ್ಲಿ ಸೊಸೆಯ ನಡವಳಿಕೆಯನೊಮ್ಮೆ ಗಮನಿಸಿ. ಅವಳಿಗೆ ತಾನು ಮಾಡಿದ್ದು ತಪ್ಪು ಎನ್ನುವ ಅರಿವಿದೆ. ಈ ಬಗ್ಗೆ ಅತ್ತೆ ಮತ್ತು ಮಾವ ಏನಾದರೂ ಹೇಳಬಹುದು ಎನ್ನುವ ಗುಮಾನಿಯೂ ಇದೆ. ಮನೆಯ ಒಳಗೆ ಕಾಲಿಡುತ್ತಲೇ ಮಾವ ಪ್ರಶ್ನಿಸಿದ್ದು ಅವಳ ಆತ್ಮಾಭಿಮಾನಕ್ಕೆ ಚುಚ್ಚಿದಂತಾಗಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಭರದಲ್ಲಿ ಒರಟಾಗಿ ಮಾತಾಡಿದ್ದಾಳೆ.
ಇದು ಅವಳ ಮಾತಿನ ಶೈಲಿ. ಬಹುಶಃ ಅವಳ ತೌರಿನಲ್ಲಿ ತಂದೆತಾಯಿಗೆ ಹೀಗೇ ಒರಟಾಗಿ ಉತ್ತರಿಸಿ ಅಭ್ಯಾಸವೂ ಇರಬಹುದು. ಕೆಲವರ ಮನೆಯಲ್ಲಿ ಮಾತುಗಾರಿಕೆಯೇ ಹೀಗೆ ವಿಪರೀತ ಒರಟಾಗಿರುವುದನ್ನು ನಾವು ನೆರೆಹೊರೆಯವರಲ್ಲಿ ಗಮನಿಸುತ್ತಲೇ ಇರುತ್ತೇವೆ. ಆದರೂ ಆಕೆ ಮಾವನಿಗೆ ಹೀಗೆ ಉತ್ತರಿಸಿದ್ದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ.