14 ತಿಂಗಳ ಗೃಹಬಂಧನದಿಂದ ಮುಫ್ತಿಗೆ ಸಿಕ್ಕಿತು ಮುಕ್ತಿ- ಕೇಂದ್ರದ ವಿರುದ್ಧ ಗುಡುಗು

mufthi
Published on

ಶ್ರೀನಗರ: ಕಳೆದ ಆಗಸ್ಟ್​ನಿಂದ ಗೃಹಬಂಧನದಲ್ಲಿದ್ದ ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಆಗಸ್ಟ್ 5ರಂದು 370ನೇ ವಿಧಿ ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಅವರನ್ನು ನಿನ್ನೆ ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಕಣಿವೆಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

ಗೃಹ ಬಂಧನದ ಅವಧಿ ಮುಗಿದ ಬಳಿಕವೂ ಕಣಿವೆ ಆಡಳಿತ ಅವರ ಗೃಹ ಬಂಧನದ ಅವಧಿಯನ್ನು ಮೂರು ತಿಂಗಳಿಗೆ ವಿಸ್ತಿರಿಸಿತ್ತು. ಸರ್ಕಾರದ ಈ ನಡೆಯನ್ನು ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅದರಂತೆ ಮೆಹಬೂಬಾ ಮುಫ್ತಿ ಅವರ ಗೃಹ ಬಂಧನದ ಕುರಿತು ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಎರಡು ವಾರಗಳ ಗಡುವು ನೀಡಿತ್ತು. ಈ ಅವಧಿ ಮುಗಿಯುವ ಮುನ್ನವೇ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾಗುತ್ತಿದ್ದಂತೆ ಕಪ್ಪು ಆಡಿಯೋ ಮೂಲಕ ಕೇಂದ್ರ ಸರ್ಕಾರದ ಮೆಹಬೂಬಾ ಕಿಡಿ ಕಾರಿದ್ದಾರೆ. ನಂತರ ಟ್ವಿಟರ್​ನಲ್ಲಿಯೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಒಂದೂ ವರ್ಷಕ್ಕೂ ಹೆಚ್ಚು ಕಾಲ ಅಂದರೆ 14 ತಿಂಗಳ ಬಳಿಕ ಬಿಡುಗಡೆ ಹೊಂದಿದ್ದೇನೆ. 370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಕ್ರೂರ ನಿರ್ಧಾರದ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿದ್ದೇನೆ. ಸರ್ಕಾರ ವಿಶೇಷ ಸ್ಥಾನಮಾನವನ್ನು ಮರಳಿಸಬೇಕು ಹಾಗೂ ದೇಶದ ಹಲವು ಭಾಗಗಳಲ್ಲಿ ಜೈಲಿನಲ್ಲಿ ಬಳಲುತ್ತಿರುವವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನಾವೆಲ್ಲರೂ ಹೋರಾಡಬೇಕಿದೆ ಎಂದಿದ್ದಾರೆ.

ಇನ್ನು ಮೆಹಬೂಬಾ ಮುಫ್ತಿ ಗೃಹ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೇ, ಅವರ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಿರುವ ಅವರ ಪುತ್ರಿ ಇಲ್ತಿಜಾ ಮುಫ್ತಿ,. ಈ ಕಠಿಣ ಸಮಯದಲ್ಲಿ ಕುಟುಂಬದ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net