

ಜೈಪುರ: ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಲು ಅಗತ್ಯವಿದ್ದ ಸಾಕ್ಷ್ಯಾಧಾರಗಳನ್ನು ಕೋತಿಯೊಂದು ಎಗರಿಸಿದ ಕುತೂಹಲದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದ ಚಾಂದ್ವಾಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಇಬ್ಬರು ಕೊಲೆ ಆರೋಪಿಗಳು ಸುಲಭದಲ್ಲಿ ತಪ್ಪಿಸಿಕೊಳ್ಳಲು ಕೋತಿ ನೆರವಾಗಿದೆ! ಇವರೇ ಕೊಲೆ ಮಾಡಿದ್ದಾನೆ ಎಂದು ಸಾಬೀತು ಪಡಿಸಲು ಮಾರಕಾಸ್ತ್ರಗಳನ್ನು ಕಷ್ಟಪಟ್ಟು ಪೊಲೀಸರು ಸಂಗ್ರಹಿಸಿದ್ದರು. ಆದರೆ ಅದು ಇರುವ ಚೀಲವನ್ನೇ ಕೋತಿ ಎತ್ತಿಕೊಂಡು ಹೋಗಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ.
ಆಗಿದ್ದೇನೆಂದರೆ, ಶಶಿಕಾಂತ್ ಶರ್ಮಾ ಎಂಬ ನಾಪತ್ತೆಯಾದ ಯುವಕ ಶವವಾಗಿ ಪತ್ತೆಯಾಗಿದ್ದ. ಇದರ ಬೆನ್ನತ್ತಿ ಹೋಗಿದ್ದ ಪೊಲೀಸರು ಚಂದ್ವಾಜಿ ನಿವಾಸಿಗಳಾದ ರಾಹುಲ್ ಕಂಡೇರಾ ಮತ್ತು ಮೋಹನ್ ಲಾಲ್ ಕಂಡೇರಾ ಎನ್ನುವವರನ್ನು ಬಂಧಿಸಿದ್ದರು. ಇವರಿಂದ ಮಾರಕಾಸ್ತ್ರಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಇವರೇ ಕೊಲೆ ಮಾಡಿದ್ದು ಎಂಬ ಬಗ್ಗೆ ಇದು ಬಹಳ ಪ್ರಬಲವಾದ ಸಾಕ್ಷ್ಯವಾಗಿತ್ತು.
ಈ ಸಾಕ್ಷ್ಯಾಧಾರಗಳನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಬೇಕಿತ್ತು. ಆದರೆ ಕೊಲೆ ಆರೋಪಿಗಳ ಅದೃಷ್ಟವೋ ಎನ್ನುವಂತೆ ಸಾಕ್ಷ್ಯ ಗಾಯಬ್ ಆಗಿದೆ. ಪೊಲೀಸ್ ಠಾಣೆ ತೀರಾ ಚಿಕ್ಕದಾಗಿದ್ದರಿಂದ, ಈ ಆಯುಧಗಳನ್ನು ಹೊಂದಿರುವ ಚೀಲವನ್ನು ಪೊಲೀಸರು ಠಾಣೆಯ ಎದುರಿಗೆ ಇರುವ ಮರದ ಕೆಳಗೆ ಇಟ್ಟಿದ್ದರು. ಆದರೆ ಪೊಲೀಸರ ಕಣ್ಣುತಪ್ಪಿಸಿ ಮಂಗವೊಂದು ಚೀಲವನ್ನು ಎತ್ತಿಕೊಂಡು ಹೋಗಿಬಿಟ್ಟಿದೆ. ಕೋರ್ಟ್ನಲ್ಲಿ ಕೊಲೆಯ ವಿಚಾರಣೆ ಬಂದಾಗ, ನ್ಯಾಯಾಧೀಶರ ಎದುರು ಪೊಲೀಸರು ನಡೆದಿರುವ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಮಂಗ ಚೀಲವನ್ನು ಕೊಂಡೊಯ್ದಿರುವ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.
ಸದ್ಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಕೊಲೆ ಆರೋಪಿಗಳಿಗೆ ಶಿಕ್ಷೆಯಾವಂತೆ ಮಾಡಲು ಪೊಲೀಸರು ಮುಂದೇನು ಕ್ರಮ ತೆಗೆದುಕೊಳ್ಳಲಿದ್ದಾರೋ ಕಾದುನೋಡಬೇಕಿದೆ.