

ಚೆನ್ನೈ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಈಗ ಎಲ್ಲೆಲ್ಲೂ ಪ್ರಧಾನಿ ನರೇಂದ್ರ ಮೋದಿಯವರದ್ದೇ ಮಾತು. ಇತ್ತ ಬೆಂಗಳೂರು ಮತ್ತು ಮೈಸೂರಿನಲ್ಲಿ ಪ್ರಧಾನಿ ಮೋದಿಯವರು ಹವಾ ಸೃಷ್ಟಿಸಿದ್ದರೆ, ಅತ್ತ ಮೋದಿಯವರ ಸಾಹಸದ ಕುರಿತು ತಮಿಳುನಾಡಿನ ಪಠ್ಯಪುಸ್ತಕದಲ್ಲಿ ಇರುವ ಪಾಠದ ಕುರಿತು ಸಕತ್ ಸುದ್ದಿಯಾಗುತ್ತಿದೆ.
ತಮಿಳುನಾಡಿನ ಒಂದನೆಯ ತರಗತಿಯ ಪಠ್ಯ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಲ್ಯದ ಕುರಿತು ಪಠ್ಯವಿದೆ ಎನ್ನಲಾಗಿದ್ದು ಇದರಲ್ಲಿ ಮೋದಿಯವರ ಸಾಹಸದ ಕುರಿತು ವಿವರಣೆ ಇದೆ.
'ಮ್ಯಾನ್ ವರ್ಸಸ್ ವೈಲ್ಡ್' ಎಂಬ ಡಿಸ್ಕವರಿ ವಾಹಿನಿಯ ಜನಪ್ರಿಯ ಸರಣಿ ಕಾರ್ಯಕ್ರಮ 2019ರಲ್ಲಿ ಪ್ರಸಾರವಾಗಿತ್ತು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಚಾನೆಲ್ನ ಬೇರ್ ಗ್ರಿಲ್ಸ್‌ಗೆ ತಮ್ಮ ಬಾಲ್ಯವನ್ನು ಹಂಚಿಕೊಂಡಿದ್ದರು. ತಾವು ಚಿಕ್ಕವರಿರುವಾಗ ಮೊಸಳೆಯನ್ನು ಮನೆಗೆ ತಂದಿದ್ದಾಗಿ ಅವರು ಹೇಳಿದ್ದರು. ಆ ಪಾಠವನ್ನೀಗ ಪುಸ್ತಕದಲ್ಲಿ ಅಡಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬ್ಯಾರಿ ಓಬ್ರಿಯನ್ ಮತ್ತು ಫೈರ್‌ಫ್ಲೈ ಪ್ರಕಾಶನಗಳ ಮೌಲ್ಯ ಶಿಕ್ಷಣದ 1 ನೇ ತರಗತಿಯ ಪುಸ್ತಕದಲ್ಲಿ ಈ ಸಾಹಸ ಕಥೆಯನ್ನು ಸೇರಿಸಿರುವುದು ತಿಳಿದುಬಂದಿದೆ.
ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದ ಮೋದಿಯವರು, ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಮರಿಯೊಂದನ್ನು ನೋಡಿ ಅದನ್ನು ಮನೆಗೆ ತಂದಿದ್ದೆ. ಅದನ್ನು ಮತ್ತೆ ಕೆರೆಗೆ ಹಾಕಬೇಕು ಎಂದು ತಾಯಿ ಬೈದು ಕಳುಹಿಸಿದ್ದರು ಎಂದು ಅನುಭವ ಹಂಚಿಕೊಂಡಿದ್ದರು. ಈ ಮಾತಿನಿಂದ ಪ್ರೇರೇಪಿತರಾಗಿರುವ ತಮಿಳುನಾಡಿನ ಖಾಸಗಿ ಶಾಲೆಯೊಂದು ಅದನ್ನು ಒಂದನೇ ತರಗತಿ ಪುಸ್ತಕದಲ್ಲಿ ಪಾಠವಾಗಿ ಸೇರಿಸಲು ತೀರ್ಮಾನಿಸಿದೆ ಅದನ್ನು ಅಳವಡಿಸಿರುವುದಾಗಿ ತಿಳಿದುಬಂದಿದೆ.
ಪ್ರಧಾನಿ ಮೋದಿ ಬಾಲ್ಯದಲ್ಲಿ ಎಷ್ಟು ಧೈರ್ಯದಿಂದ ಇದ್ದರು ಎಂದು ತಿಳಿಸಲು ಈ ಪಠ್ಯ ಅಳವಡಿಸಲಾಗಿದೆ ಎಂದು ಅದು ಹೇಳಿಕೊಂಡಿದೆ. ಪಠ್ಯಪುಸ್ತಕದಲ್ಲಿ 'ನರೇಂದ್ರ ದಾಮೋದರ ದಾಸ್ ಮೋದಿ ಅವರು ಭಾರತದ 14ನೇ ಮತ್ತು ಪ್ರಸ್ತುತ ಪ್ರಧಾನಿ. ಅವರು ತಮ್ಮ ಬಾಲ್ಯದಲ್ಲಿ ಎಷ್ಟು ಧೈರ್ಯಶಾಲಿಯಾಗಿದ್ದರೆಂದರೆ ಅವರೊಮ್ಮೆ ಮೊಸಳೆಯನ್ನು ಹಿಡಿದು ಮನೆಗೆ ತಂದಿದ್ದರು' ಎಂದು ಉಲ್ಲೇಖಿಸಲಾಗಿದೆ.
ಇನ್ನು ಮೋದಿಯವರು 8ನೇ ತರಗತಿಯಲ್ಲಿ ಇರುವಾಗ ಅವರ ಮೇಲೆ ಮೊಸಳೆ ದಾಳಿ ಮಾಡಿರುವ ಕುರಿತು 'ಬಾಲ್ ನರೇಂದ್ರ - ಚೈಲ್ಡ್‌ಹುಡ್ ಸ್ಟೋರೀಸ್ ಆಫ್ ನರೇಂದ್ರ ಮೋದಿ' ಎಂಬ ಕಾಮಿಕ್ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ರನ್ನಡೆ ಪ್ರಕಾಶನ ಮತ್ತು ಬ್ಲೂ ಸ್ನೇಲ್ ಅನಿಮೇಷನ್‌ನ ಈ ಪುಸ್ತಕದಲ್ಲಿ ಪ್ರಧಾನಿ ಎಷ್ಟು ಧೈರ್ಯವಂತರು ಎಂದು ವಿವರಿಸುವ ಕಥೆಗಳ ಪಟ್ಟಿ ಹೊಂದಿದೆ. ಗುಜರಾತ್‌ನ ಮೊಸಳೆಗಳಿಂದ ತುಂಬಿರುವ ಸರೋವರದಲ್ಲಿ ಈಜುತ್ತಿದ್ದಾಗ ಈ ಘಟನೆ ನಡೆದಿತ್ತು. ಆಗ ಪ್ರಧಾನಿಯವರ ಕಾಲಿಗೆ ಒಂಬತ್ತು ಹೊಲಿಗೆಗಳನ್ನು ಹಾಕಲಾಗಿತ್ತು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.