ರಸ್ತೆಯಲ್ಲಿ ನಿಂತು ಹಾಯ್​ ಚೆನ್ನಾಗಿದ್ಯಾ ಎನ್ನುವಷ್ಟರಲ್ಲಿಯೇ ಫೋನ್​ ಗಾಯಬ್​! ಖತರ್ನಾಕ್​ ಖದೀಮರು ಅಂದರ್​

mobile
Published on

ಬೆಂಗಳೂರು: ರಸ್ತೆಬದಿ, ಪಾದಚಾರಿ ಮಾರ್ಗದಲ್ಲಿ ಮೊಬೈಲ್ ನಲ್ಲಿ ಸಂಭಾಷಣೆ ನಡೆಸುವ ದಾರಿಹೋಕರ ಬಳಿ ಬೈಕ್ ನಲ್ಲಿ ಬಂದು ಫೋನ್ ಕಳವು ಮಾಡುತ್ತಿದ್ದ ಸಹೋದರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ.

ಪಾದರಾಯನಪುರದ ಗೋರಿಪಾಳ್ಯದ ಇಮ್ರಾನ್ ಖಾನ್ ಅಲಿಯಾಸ್ ಬಡಾ ಮಚ್ಚರ್ (24) ಮತ್ತು ಇರ್ಫಾನ್ ಪಾಷಾ ಅಲಿಯಾಸ್ ಚೋಟಾ ಮಚ್ಚರ್ (19) ಬಂಧಿತರು. ಕದ್ದ ಮೊಬೈಲ್ ಕಳವು ಮಾಡುತ್ತಿದ್ದ ಓಕಳಿಪುರದ ರಾಜಾ ಸಿಂಗ್ (27) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8.20 ಲಕ್ಷ ರೂ.ಮೌಲ್ಯದ 70 ಮೊಬೈಲ್, 1 ಬೈಕ್ ಜಪ್ತಿ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೇ ತಿಳಿಸಿದ್ದಾರೆ.

ಇಮ್ರಾನ್ ಮತ್ತು ಇರ್ಫಾನ್ ಸಹೋದರರು ಆಗಿದ್ದಾರೆ. ಜೆ.ಸಿ.ರಸ್ತೆಯಲ್ಲಿ ಇಮ್ರಾನ್ ಕಾರುಗಳಿಗೆ ಸ್ಟಿಕ್ಕರಿಂಗ್ ಮಾಡುವ ಕೆಲಸ ಹಾಗೂ ಇರ್ಫಾನ್ ಮೆಜೆಸ್ಟಿಕ್ ನ ಪಾದಚಾರಿ ಮಾರ್ಗ ದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಜತೆಗೆ ಮೊಬೈಲ್ ಮತ್ತು ಬೈಕ್ ಕಳ್ಳತನ ಸಹ ಮಾಡುತ್ತಿದ್ದರು. ಕದ್ದ ಬೈಕ್ ಏರಿ ಸಹೋದರರು ಚಾಮರಾಜಪೇಟೆ, ವಿ.ವಿ.ಪುರ, ಶಂಕರಪುರ ಸುತ್ತಲ ಪ್ರದೇಶದಲ್ಲಿ ಸುತ್ತಾಡುತ್ತಿದ್ದರು. ಸಾರ್ವಜನಿಕರು ರಸ್ತೆಬದಿ ಅಥವಾ ಪಾದಚಾರಿ ಮಾರ್ಗದಲ್ಲಿ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿಕೊಂಡು ಮೈಮರೆತ್ತಿದ್ದರೇ ಅಂತವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಅವರಿಗೆ ಗೊತ್ತಾಗದಂತೆ ಬೈಕ್ ನಲ್ಲಿ ಹಿಂದಿನಿಂದ ಹೋಗಿ ಮೊಬೈಲ್ ಕಸಿದುಕೊಂಡು ಪರಾರಿ ಆಗುತ್ತಿದ್ದರು. ಇತ್ತ ಮೊಬೈಲ್ ವಾರಸುದಾರರು ಗಡಿಬಿಡಿಯಲ್ಲಿ ಬೈಕ್ ನಂಬರ್ ನೋಡಿಕೊಳ್ಳಲು ಸಾಧ್ಯ ವಾಗುತ್ತಿರಲಿಲ್ಲ. ಇಂತಹ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ವಿ.ವಿ.ಪುರ ಠಾಣೆಯಲ್ಲಿ ‌ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಕೆಲವು ಸುಳುವಿನ ಆಧಾರದ ಮೇಲೆ ಪೊಲೀಸರು ‌ಕಾರ್ಯಾಚರಣೆ ನಡೆಸಿ ಆರೋಪಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಹರೀಶ್ ಪಾಂಡೇ ತಿಳಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಭಾಗಿ: ಇಮ್ರಾನ್ ಮತ್ತು ಇರ್ಫಾನ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಚಂದ್ರಾ ಲೇಔಟ್, ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹ ಕೃತ್ತ ಎಸಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕದ್ದ ಮೊಬೈಲ್ ಖರೀದಿಸಿದವ ಜೈಲಿಗೆ: ಆರೋಪಿಗಳಾದ ಸಹೋದರ ಬಳಿ ಕದ್ದ ಮೊಬೈಲ್ ಖರೀದಿ ಮಾಡುತ್ತಿದ್ದ ಗಾಂಧಿನಗರ್ ಎಸ್.ಎನ್. ಬಜಾರ್ ಮೊಬೈಲ್ ರಿಪೇರಿ ಅಂಗಡಿ ಮಾಲೀಕ ರಾಜಾ ಸಿಂಗ್ ಎಂಬಾತನನ್ನು ಪೊಲೀಸರು ‌ಬಂಧಿಸಿದ್ದಾರೆ.

ಕದ್ದ ಮೊಬೈಲ್ ಖರೀದಿಸುತ್ತಿದ್ದ ರಾಜಾ ಸಿಂಗ್, ಸ್ವೀಕರ್, ಡಿಸ್‌ಪ್ಲೇ ಬಿಚ್ಚಿ ತನ್ನ ಬಳಿಗೆ ಮೊಬೈಲ್ ರಿಪೇರಿಗೆ ಬರುತ್ತಿದ್ದವರಿಗೆ ಅಳವಡಿಸಿ ಹಣ ಪಡೆಯುತ್ತಿದ್ದ. ಇದೇ ರೀತಿ ಮೊಬೈಲ್ ನಲ್ಲಿ ಇತರ ಭಾಗಗಳನ್ನು ‌ಬಿಚ್ಚಿ ಬಳಸಿಕೊಳ್ಳುತ್ತಿದ್ದ. ಇದರಿಂದ ಪೊಲೀಸರ ತನಿಖೆಗೆ ಅಡ್ಡಿ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net