

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವೆ, ನನಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದ್ದು, ವೈದ್ಯರ ಸಲಹೆಯ ಮೇರೆಗೆ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಲಿದ್ದೇನೆ. ನನ್ನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು, ಕೊವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್ ಆಗಬೇಕಾಗಿ ವಿನಂತಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಶಶಿಕಲಾ ಅವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಾವು ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಬೆಳಗ್ಗೆ ಎದ್ದ ಕೂಡಲೇ ಬಿಸಿನೀರಿಗೆ ನಿಂಬೆಹಣ್ಣು, ಅರಿಶಿಣ ಮಿಶ್ರಣ ಮಾಡಿಕೊಂಡು ಕುಡಿಯುತ್ತಿರುವುದಾಗಿ ಹೇಳುವ ಮೂಲಕ ಕರೊನಾದ ಭೀಕರತೆ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಿದ್ದಾರೆ.
ಇದೀಗ ಕರೊನಾದ ಆರಂಭಿಕ ಸಾಮಾನ್ಯ ಲಕ್ಷಣಗಳಷ್ಟೇ ಕಾಣಿಸಿಕೊಂಡಿದ್ದು, ತಮ್ಮ ಆರೋಗ್ಯ ಸ್ಥಿತಿ ಚೆನ್ನಾಗಿರುವುದಾಗಿ ಹೇಳಿದ್ದಾರೆ.
ಸಚಿವೆ ಕೊರೊನಾ ಬಂದಿರುವ ಸುದ್ದಿ ತಿಳಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೇಗ ಗುಣಮುರಾಗುವಂತೆ ಹಾರೈಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಶೀಘ್ರದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.