ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ಯುವತಿಯರ ನೋಡಿ ಮದುವೆ ಪ್ರಪೋಸಲ್‌ ಇಡೋ ಯುವಕರೇ... ಎಚ್ಚರ ಎಚ್ಚರ...

Marriage_01
Published on

ಬೆಂಗಳೂರು: ಮದುವೆಯಾಕಾಂಕ್ಷಿಗಳು ಹೆಚ್ಚುತ್ತಿದ್ದಂತೆಯೇ ಮದುವೆ ಮಾಡಿಸುವ ಮ್ಯಾಟ್ರಿಮೋನಿಯಲ್‌ ಸೈಟ್‌ಗಳು ಹೆಚ್ಚುತ್ತಲೇ ಸಾಗಿವೆ. ಈ ವಿವಾಹದ ವೆಬ್‌ಸೈಟ್‌ಗಳಿಂದ ಮದುವೆಯಾದವರೂ ಇದ್ದರೆ, ಅದೇ ಇನ್ನೊಂದೆಡೆ ಇದರಿಂದ ಮೋಸಕ್ಕೆ ಒಳಗಾಗಿರುವವರು ಅಷ್ಟಿಷ್ಟಲ್ಲ.

ಮೋಸ ಹೋಗುವವರು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಯುವತಿಯರು. ಆದರೆ ಈಗ ಕಾಲ ಬದಲಾಗಿದೆ. ಮ್ಯಾಟ್ರಿಮೋನಿಯಲ್‌ ಸೈಟ್‌ ನೋಡಿ, ಅಲ್ಲಿ ಹುಡುಗಿಯೊಬ್ಬಳನ್ನು ಇಷ್ಟಪಟ್ಟು ನೀವೇನಾದರೂ ನಿಮ್ಮ ಒಪ್ಪಿಗೆ ಸೂಚಿಸಿ ಮೆಸೇಜ್‌ ಕಳಿಸಿದ್ರೋ ಅಲ್ಲಿಗೆ ಮುಗೀತು ನಿಮ್‌ ಕಥೆ.

ಇದು ಎಲ್ಲರಿಗೂ ಅನ್ವಯ ಆಗುವುದಿಲ್ಲವಾದರೂ ಇಂಥ ಕೇಸ್‌ಗಳು ಈಗೀಗ ಹೆಚ್ಚುತ್ತಲೇ ಇವೆ. ಇಂಥದ್ದೇ ಒಂದು ಕೇಸು ಇದೀಗ ಬೆಂಗಳೂರಿನ ದಕ್ಷಿಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ. ಶ್ರೀಕೃಷ್ಣನಗರದ ನಿವಾಸಿ ವಿನಾಯಕ (40) ಎನ್ನುವವರು ಈ ದೂರು ದಾಖಲು ಮಾಡಿದ್ದಾರೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ವಯಸ್ಸು 40 ಆಗಿದ್ದರೂ ಮದುವೆಯಾಗಿಲ್ಲದ ಕಾರಣ ವಿನಾಯಕ ಅವರು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ನೋಡಿ ಕೆಲ ವಧುಗಳಿಗೆ ರಿಕ್ವೆಸ್ಟ್ ಕಳುಹಿಸಿದ್ದರು. ಫೆಬ್ರವರಿ 17 ರಂದು ಅವರಿಗೆ ಅಪರಿಚಿತರಿಂದ ಕರೆ ಬಂದಿದೆ.

ನಾವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನೀವು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಿಕ್ವೆಸ್ಟ್ ಕಳಿಸಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದಿದ್ದಾರೆ. ಇದನ್ನು ಕೇಳಿ ವಿನಾಯಕ ಅವರಿಗೆ ಆಘಾತವಾಗಿದೆ. ಇಷ್ಟು ಹೇಳಿ ಸುಮ್ಮನಾಗದ ಅವರು, "ನೀವು ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಪ್ರಕರಣ ಮುಚ್ಚಿಹಾಕ್ತಿವಿ" ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ.

ಪೊಲೀಸರು ಎಂದು ಹೇಳಿ ಹೆದರಿದ ವಿನಾಯಕ ಅವರು ಹಿಂದೆ ಮುಂದೆ ಯೋಚನೆ ಮಾಡದೇ ಅವರು ಸೂಚಿಸಿರುವ ಬ್ಯಾಂಕ್‌ ಅಕೌಂಟ್‌ಗೆ ಹಂತ-ಹಂತವಾಗಿ 1 ಲಕ್ಷ ರೂ ಹಾಕಿದ್ದಾರೆ. ನಂತರ ವಾಪಸ್‌ ಕರೆ ಮಾಡಿದಾಗ ಅದು ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ.

ನಂತರ ತಾವು ಮೋಸ ಹೋಗಿರುವುದು ಅವರಿಗೆ ತಿಳಿದು ಇದೀಗ ಪ್ರಕರಣ ದಾಖಲು ಮಾಡಿದ್ದಾರೆ. ಹೀಗೆ ಪೊಲೀಸರ ಸೋಗಿನಲ್ಲಿ ಕರೆಗಳು ಬರುತ್ತಿರುವುದು ಹೆಚ್ಚಾಗುತ್ತಿದೆ. ಆದ್ದರಿಂದ ಇಂಥ ಕರೆಗಳಿಗೆ ಕಿವಿಗೊಡಬೇಡಿ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸುಳ್ಳು ಹೇಳಿ ಪುರುಷರನ್ನು ಯಾಮಾರಿಸಲಾಗುತ್ತಿದೆ. ಯಾವುದಾದರೂ ಕಾರಣಕ್ಕೆ ಸಂಶಯ ಬಂದರೆ ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಪೊಲೀಸರು ಹೇಳಿದ್ದಾರೆ.

ಆದ್ದರಿಂದ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಹುಡುಗಿಗೆ ರಿಕ್ವೆಸ್ಟ್‌ ಕಳಿಸುವ ಮುನ್ನ ವಿವಾಹಾಕಾಂಕ್ಷಿ ಗಂಡುಮಕ್ಕಳೇ ಎಚ್ಚರ... ಎಚ್ಚರ...

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net