

ನವದೆಹಲಿ: ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಕೊನೆಯ ಪುತ್ರ ತೇಜಸ್ವಿ ಯಾದವ್ ಅವರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಗೆಳತಿ ರಾಜೇಶ್ವರಿ ಎಕೆಎ ರೇಚೆಲ್ ಅವರೊಂದಿಗೆ ಮದುವೆ ಅದ್ಧೂರಿಯಾಗಿ ನಡೆದಿದೆ.
ಇವರು ಗುರುವಾರ (ಡಿ.9) ಬೆಳಗ್ಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದೆಹಲಿಯ ಸೈನಿಕ್ ಫಾರ್ಮಸ್ನಲ್ಲಿ ಮದುವೆ ಏರ್ಪಡಿಸಲಾಗಿತ್ತು. ಆದರೆ ಮದುವೆಯ ಬಗ್ಗೆ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಇದಕ್ಕೆ ಕಾರಣವೂ ತಿಳಿದಿಲ್ಲ. ಇವರ ಮದುವೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಆದರೆ ವಧು ರಾಜೇಶ್ವರಿ ಅವರ ಸಹೋದರಿ ರೋಹಿಣಿ ಆಚಾರ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿವಾಹದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದರು. ಆಗಲೇ ಮದುವೆ ವಿಷಯ ಜಗಜ್ಜಾಹೀರವಾಗಿದೆ.
ಅಷ್ಟಕ್ಕೂ ಅವರ ಸಹೋದರಿ ಕೂಡ ಮದುವೆಗೆ ಹೋಗಲಿಲ್ಲ ಎನ್ನುವುದು ವಿಶೇಷ. ಟ್ವಿಟರ್ನಲ್ಲಿ ಅವರು, ನಾನು ನಿನ್ನ ಮದುವೆಗೆ ಬರಲು ಆಗಲಿಲ್ಲ. ಆದರೆ ನನ್ನ ಆಶೀರ್ವಾದ ನಿಮ್ಮಿಬ್ಬರ ಮೇಲಿದೆ. ಟುಟು ಮತ್ತು ರೇಚೆಲ್ಗೆ ಮದುವೆಯ ಶುಭಾಶಯಗಳು, ನಿಮ್ಮಿಬ್ಬರ ಜೀವನ ಉಸಿರಿರುವವರೆಗೂ ಸಂತೋಷವಾಗಿರಲೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಜೋಡಿ ದೆಹಲಿಯ ‘ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ’ ಒಟ್ಟಿಗೇ ಓದುತ್ತಿದ್ದರು. ಈಗ 6-7 ವರ್ಷಗಳಿಂದ ಸ್ನೇಹಿತರಾಗಿದ್ದರು. ಮದುವೆಗೆ ಕೇವಲ 50 ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್, ರಾಜ್ಯಸಭಾ ಸಂಸದೆ ಮಿಸಾ ಭಾರತಿ ಇತರರು ಸೇರಿದಂತೆ ಉನ್ನತ ರಾಜಕೀಯ ನಾಯಕರು ಉಪಸ್ಥಿತರಿದ್ದರು.