

ಪುಲ್ವಾಮಾ: 2019ರ ಫೆಬ್ರುವರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ನಡೆದಿದ್ದ ಘೋರ ಬಾಂಬ್ಬ್ಲಾಸ್ಟ್ ಪ್ರಕರಣದಲ್ಲಿ 40 ಮಂದಿ ಭಾರತದ ಯೋಧರು ಜೀವ ಕಳೆದುಕೊಂಡಿದ್ದರು. ಇದೀಗ ಸ್ವಾತಂತ್ರ್ಯೋತ್ಸವದ ಸಮೀಪದಲ್ಲಿಯೇ ಇನ್ನೊಂದು ಬಾಂಬ್ ಬ್ಲಾಸ್ಟ್ಗೆ ಉಗ್ರರ ಸಂಚು ನಡೆಸಿದ್ದು, ಭಾರಿ ಅನಾಹುತವೊಂದು ತಪ್ಪಿದೆ.
ಪೊಲೀಸರು ಮತ್ತು ಭದ್ರತಾ ಪಡೆಗಳು ಪುಲ್ವಾಮಾದ ಸರ್ಕ್ಯುಲರ್ ರಸ್ತೆಯ ತಹಾಬ್ ಕ್ರಾಸಿಂಗ್ ಬಳಿ ಅಂದಾಜು 25ರಿಂದ 30 ಕೆಜಿ ತೂಕದ ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್, ಸ್ವಾತಂತ್ರ್ಯೋತ್ಸವವನ್ನೇ ಗುರಿಯಾಗಿಸಿಕೊಂಡು ಈ ಸಂಚು ರೂಪಿಸಿರುವ ಶಂಕೆ ಇದೆ. ಐಡಿಯಿಯನ್ನು ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಲಾಗಿದೆ ಎಂದು ಹೇಳಿದರು. ಕೆಲ ವರ್ಷಗಳಿಂದ ಉಗ್ರರು ದಾಳಿಗೆ ಐಇಡಿ ಬಳಸುತ್ತಿದ್ದಾರೆ. ಕೆಲವು ಐಇಡಿ ತಜ್ಞರು ಗಡಿಪ್ರದೇಶದ ಒಳನುಗ್ಗಿ ಉಗ್ರರ ಕೈಜೋಡಿಸುತ್ತಿದ್ದಾರೆ ಎಂದರು.
ಕಳೆದ ಗುರುವಾರ ಪುಲ್ವಾಮಾದ ಗಡೂರ ಗ್ರಾಮದ ಟೆಂಟ್‌ನಲ್ಲಿ ಕೂಲಿ ಕಾರ್ಮಿಕರ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಬಿಹಾರದ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದರು. ಮೃತ ಕಾರ್ಮಿಕನನ್ನು ಬಿಹಾರದ ಸಕ್ವಾ ಪರ್ಸಾ ನಿವಾಸಿ ಮೊಹಮ್ಮದ್ ಮುಮ್ತಾಜ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮೊಹಮ್ಮದ್ ಆರಿಫ್ ಮತ್ತು ಅವರ ಮಗ ಮೊಹಮ್ಮದ್ ಮಜ್ಬೂಲ್ ಎಂದು ಗುರುತಿಸಲಾಗಿದ್ದು, ಬಿಹಾರದ ರಾಂಪೋರ್ ನಿವಾಸಿಗಳಾಗಿದ್ದಾರೆ. ಈ ಕಾರ್ಮಿಕರು ಹತ್ತಿ ಹಾಸಿಗೆಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐಇಡಿ ನಿಷ್ಕ್ರೀಯಗೊಳಿಸಿರುವ ವಿಡಿಯೋ ಇಲ್ಲಿದೆ: