ಅಪ್ಪು ಸಮಾಧಿ ಬಳಿ ಸಪ್ತಪದಿ ತುಳಿಯಲು ಬಂದ ಪ್ರೇಮಿಗಳಿಗೆ ನಿರಾಸೆ: ಎಲ್ಲ ಜೋಡಿಗಳಿಗೆ ಕುಟುಂಬ ಹಾಕಿದೆ ಈ ಷರ‌ತ್ತು

1186605
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನೇ ದೇವರೆಂದು ನಂಬಿದವರು ಹಲವರು. ಇದೇ ಕಾರಣಕ್ಕೆ ದೇವರ ಎದುರು ಮದುವೆಯಾಗಲು ಬಯಸಿ ಬಳ್ಳಾರಿಯ ಜೋಡಿಯೊಂದು ಬೆಂಗಳೂರಿಗೆ ಧಾವಿಸಿತ್ತು. ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಪುನೀತ್​ ರಾಜ್​ಕುಮಾರ್​ ಸಮಾಧಿ ಎದುರು ಮದುವೆ ಆಗಲು ನಿರ್ಧರಿಸಿ ಬಂದಿದ್ದರು.

ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ತಮಗೆ ಅಪ್ಪು ಎಂದರೆ ತುಂಬಾ ಪ್ರೀತಿ. ಆದ್ದರಿಂದ ಅವರ ಸಮಾಧಿಯನ್ನೇ ಸಾಕ್ಷಿಯಾಗಿಸಿ ಮದುವೆಯಾಗಲು ನಿರ್ಧರಿಸಿರುವುದಾಗಿ ಜೋಡಿ ಹೇಳಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಗಂಗಾ, ‘ಜಾತಕ ತೋರಿಸಿಯೋ ಅಥವಾ ದೇವಸ್ಥಾನದಲ್ಲಿ ಮದುವೆ ಆಗುವುದು ಸಹಜ. ಹಾಗಂತ ದೇವಸ್ಥಾನದಲ್ಲಿ ಮದುವೆ ಆದವರು ಜೀವನ ಪರ್ಯಂತ ಚೆನ್ನಾಗಿ ಇರುತ್ತಾರೆ ಎಂದು ಹೇಳೋಕಾಗಲ್ಲ. ಪುನೀತ್​ ಮಾಡಿದ ಸಮಾಜ ಸೇವೆ ನೋಡಿದರೆ ಅವರಿಗಿಂತ ದೊಡ್ಡ ದೇವರು ಯಾರೂ ಇಲ್ಲ ಎನಿಸುತ್ತದೆ. ಪುನೀತ್​ ಬದುಕಿದಿದ್ದರೆ ಮದುವೆ ಬಳಿಕ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದುಕೊಂಡಿದ್ವಿ. ಆದ್ದರಿಂದ ಈ ದೇವರ ಎದುರು ಸಪ್ತಪದಿ ತುಳಿಯುವುದಾಗಿ ಹೇಳಿದ್ದರು.

ಮದುವೆಗೆ ಡಾ.ರಾಜ್‌ ಕುಟುಂಬದ ಅನುಮತಿಗಾಗಿ ಅವರು ಕಾದಿದ್ದರು. ಪೊಲೀಸರು ಇಲ್ಲಿ ಮದುವೆಯಾಗಲು ಜೋಡಿಗೆ ಬಿಡಲಿಲ್ಲ. ಆದರೂ ಪಟ್ಟುಬಿಡದ ಜೋಡಿ ಕಂಠೀರವ ಸ್ಟುಡಿಯೋ ಬಳಿಯೇ ಇರುವ ಆಂಜನೇಯ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ಮದುವೆಯ ಬಳಿಕ ಪುನೀತ್‌ ಸಮಾಧಿಗೆ ಹೋಗಿ ಆಶೀರ್ವಾದ ಪಡೆಯುವುದಾಗಿ ಹೇಳಿದ್ದಾರೆ.

ಕೊನೆಗೂ ಪಟ್ಟು ಬಿಡದೆ ಅಪ್ಪು ಸಮಾಧಿ ಬಳಿಯ ದೇವಸ್ಥಾನದಲ್ಲಿ ಸಪ್ತಪದಿ ತುಳಿದ ಅಭಿಮಾನಿ ಜೋಡಿ

ರಾಘವೇಂದ್ರ ರಾಜ್‌ಕುಮಾರ್‌ ಷರತ್ತು:

ಈ ಪ್ರೇಮಿಗಳ ಮದುವೆಯ ವಿಷಯ ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ಈ ಕುರಿತು ಮಾತನಾಡಿದ ನಟ ರಾಘವೇಂದ್ರ ರಾಜ್​ಕುಮಾರ್​, ‘ಬಳ್ಳಾರಿಯ ಜೋಡಿ ಬಂದು ಮದುವೆಗೆ ಅನುಮತಿ ಕೇಳಿತ್ತು. ಆದರೆ ನಾವು ಒಪ್ಪಿಗೆ ಕೊಡಲಿಲ್ಲ. ಅವರು ಒಂದೊಂದು ಸಲ ಒಂದೊಂದು ರೀತಿ ಹೇಳುತ್ತಿದ್ದಾರೆ. ಆದ್ದರಿಂದ ಒಪ್ಪಿಗೆ ಕೊಡಲಿಲ್ಲ ಎಂದರು.

ನೋಡಿ ಪೊಲೀಸರದ್ದು ಕೆಲವೊಂದು ನಿಯಮಗಳು ಇರುತ್ತವೆ.ಮದುವೆಗೆ ನಿರಾಕರಿಸುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಕೆಲವರು ಅಪ್ರಾಪ್ತರಾಗಿರುತ್ತಾರೆ. ಅಪ್ಪು ಸಮಾಧಿ ಎದುರು ಮದುವೆಯಾಗಿ ಕೊನೆಯಲ್ಲಿ ಅವರ ಕುಟುಂಬಸ್ಥರು ಬಂದು ಗಲಾಟೆ ಮಾಡಿದರೆ ಚೆನ್ನಾಗಿರಲ್ಲ. ಟಿವಿಯಲ್ಲಿ ಒಂದು ಮದುವೆ ನೋಡಿದ ಬಳಿಕ ಅನೇಕರು ಬರಲು ಆರಂಭಿಸುತ್ತಾರೆ. ಆದ್ದರಿಂದ ಈ ಮದುವೆಗೆ ಅನುಮತಿ ನೀಡಲಿಲ್ಲ. ಆದರೆ ಒಂದು ವೇಳೆ ಇಲ್ಲಿ ಬಂದು ಮದುವೆಯಾಗಲೇಬೇಕು ಎನ್ನುವ ಜೋಡಿಗಳು ತಮ್ಮ ಜತೆ ತಂದೆ-ತಾಯಿ ಮತ್ತು ಕುಟುಂಬರಸ್ಥರನ್ನು ಕರೆತರಬೇಕು. ಹಾಕಿದ್ದರೆ ಅನುಮತಿ ಕೊಡಬಹುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net