ಭಾವಿ ಅಳಿಯನಿಗೆ ಷರತ್ತು ವಿಧಿಸಿ ಮಗಳನ್ನು ಕಳೆದುಕೊಂಡ ಅಪ್ಪ- ಮನನೊಂದು ಆತ್ಮಹತ್ಯೆ ಮಾಡಿಕೊಂಡ ಜೋಡಿ!

lovers1
Published on

ಚಾಮರಾಜನಗರ: ಮಗಳನ್ನು ಮದುವೆಯಾಗುವುದಿದ್ದರೆ ನೀನು ಹೀಗೆ ಮಾಡಬೇಕು, ಹಾಗೆ ಮಾಡಬೇಕು, ಇಷ್ಟು ಸಂಪಾದನೆ ಮಾಡಬೇಕು, ಇಂಥ ನೌಕರಿ ಪಡೆಯಬೇಕು ಇತ್ಯಾದಿಯಾಗಿ ಯುವತಿಯ ತಂದೆ ಮಗಳ ಪ್ರೇಮಿಗೆ ಷರತ್ತು ವಿಧಿಸುವುದನ್ನು ನೋಡಿರುತ್ತೇವೆ. ಅಂಥದ್ದೇ ಒಂದು ಷರತ್ತು ವಿಧಿಸಿದ್ದರಿಂದ ಇದೀಗ ಆ ತಂದೆ ತನ್ನ ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿಹೋಗಿದ್ದಾರೆ.

ಅತ್ತ ಯುವತಿಯನ್ನು ಮದುವೆಯಾಗುವ ಆಸೆಯಲ್ಲಿದ್ದ ಯುವಕ ಕೂಡ ಆಕೆಯ ಅಪ್ಪನ ಷರತ್ತು ಸಾಧಿಸುವುದು ಕಷ್ಟವೆಂದು ತಿಳಿದು ಆತನೂ ಸಾವಿನ ಹಾದಿ ತುಳಿದಿದ್ದಾನೆ. ಹೀಗೆ ಪ್ರೇಮಿಗಳು ಈ ಷರತ್ತಿನಿಂದಾಗಿ ದುರಂತ ಅಂತ್ಯ ಕಂಡಿರುವುದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಪ್ರೇಮಿಗಳು.

21 ವರ್ಷದ ಸತೀಶ್ ಹಾಗೂ 20 ವರ್ಷದ ವರಲಕ್ಷ್ಮಿ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸತೀಶ್ ಬಿ ಕಾಂ ಮುಗಿಸಿ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕಿದ್ದ. ವರಲಕ್ಷ್ಮಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಳು. ಒಬ್ಬರನ್ನು ಒಬ್ಬರು ಬಿಟ್ಟು ಇರಲಾರದಷ್ಟು ಅವರ ಬಾಂಧವ್ಯ ಬೆಳೆದಿತ್ತು. ಕೊನೆಗೆ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಮೊದಲು ವರಲಕ್ಷ್ಮಿಯ ಅಪ್ಪ-ಅಮ್ಮ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಕಾರಣವೂ ಇತ್ತು. ಆತ ಇನ್ನೂ ನೌಕರಿಯ ಹುಡುಕಾಟದಲ್ಲಿದ್ದ. ಕೈಯಲ್ಲಿ ಕೆಲಸವಿಲ್ಲದೇ ತಮ್ಮ ಪುತ್ರಿಯನ್ನು ಹೇಗೆ ಆತ ನೋಡಿಕೊಳ್ಳುತ್ತಾನೆ ಎಂಬ ಆತಂಕ ಅವರನ್ನು ಕಾಡಿತ್ತು. ಆದರೆ ಪ್ರೀತಿಯ ಬಲೆಗೆ ಬಿದ್ದಿದ್ದ ಈ ಜೋಡಿಗೆ ಅದ್ಯಾವುದೂ ಬೇಕಿರಲಿಲ್ಲ.

ಕೊನೆಗೆ ಮದುವೆಗೆ ಒಪ್ಪಿಗೆ ಯುವತಿಯ ಅಪ್ಪ, ‘ಈ ಮದುವೆಗೆ ನಾನು ಒಪ್ಪುತ್ತೇನೆ. ಆದರೆ ಕೈಯಲ್ಲಿ ಉದ್ಯೋಗವಿಲ್ಲ. ಆದ್ದರಿಂದ ಸರ್ಕಾರಿ ನೌಕರಿಯನ್ನು ಮೊದಲು ಪಡೆದುಕೊಂಡು ಬಾ. ಆಮೇಲೆ ನನ್ನ ಮಗಳನ್ನು ಮದುವೆ ಮಾಡಿಕೊಡುತ್ತೇನೆ’ ಎಂದಿದ್ದಾರೆ.

ಸತೀಶ್ ಸರ್ಕಾರಿ ಕೆಲಸ ಪಡೆಯಲು ಪ್ರಯತ್ನ ನಡೆಸಿದ್ದ. ಆದರೆ ಅದು ಸಿಗುವುದು ಕಷ್ಟ ಎನ್ನುವುದು ತಿಳಿಯಿತು. ಆದ್ದರಿಂದ ಇಬ್ಬರೂ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಇಬ್ಬರೂ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಮೈಸೂರಿಗೆ ಬಂದ ಈ ಜೋಡಿ ಲಾಡ್ಜ್‌ನಲ್ಲಿ ರೂಂ ಪಡೆದಿದ್ದಾರೆ. ನಂತರ ಸತೀಶ್‌ ತನ್ನ ತಾಯಿಗೆ ಕರೆ ಮಾಡಿ ಕರೊನಾ ಬಗ್ಗೆ ಎಚ್ಚರವಾಗಿರುವಂತೆ ಹೇಳಿದ್ದಾನೆ. ಅಷ್ಟೇ, ಇಬ್ಬರೂ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net