

ಮುಂಬೈ: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ಇಹಲೋಹ ತ್ಯಜಿಸಿದ್ದಾರೆ.
ಕಳೆದೊಂದು ತಿಂಗಳಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಲತಾ, ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
2019ರಲ್ಲಿ ಉಸಿರಾಟದ ತೊಂದರೆ ಅಥವಾ ಎದೆಯ ದಟ್ಟಣೆ ಶ್ವಾಸಕೋಶದ ಕಾಯಿಲೆಯಿಂದಾಗಿ ಲತಾ ಮಂಗೇಶ್ಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚೇತರಿಸಿಕೊಂಡಿದ್ದರು. ಆದರೆ ಇದೀಗ ಲತಾ ಮಂಗೇಶ್ಕರ್ ಅವರಿಗೆ ಕರೊನಾ ಸೋಂಕು ತಗುಲಿದ್ದು, ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇದೀಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
1942 ರಲ್ಲಿ 13 ನೇ ವಯಸ್ಸಿನಲ್ಲಿ ಗಾಯನವನ್ನು ಶುರು ಮಾಡಿ ಅಲ್ಲಿಂದ ಇಲ್ಲಿಯವರೆಗೂ ವಿಶ್ವಖ್ಯಾತಿ ಗಳಿಸಿರುವ ಗಾಯಕಿ ಲತಾ. ಹಲವಾರು ಭಾರತೀಯ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ನಾಲ್ಕು ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಎರಡು ಫಿಲ್ಮ್ಫೇರ್ ವಿಶೇಷ ಪ್ರಶಸ್ತಿಗಳು, ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ.