

ಮಂಬೈ: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಆರೋಗ್ಯದ ಕುರಿತಂತೆ ಇಲ್ಲಸಲ್ಲದ ಗಾಳಿಸುದ್ದಿಗಳನ್ನು ಹರಡಬೇಡಿ ಎಂದೂ ಅವರು ಹೇಳಿದ್ದಾರೆ.
ಸದ್ಯ ಲತಾ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ 92 ವರ್ಷ ವಯಸ್ಸಾಗಿರುವುದರಿಂದ ಆರೋಗ್ಯ ಸುಧಾರಣೆ ಸ್ವಲ್ಪ ನಿಧಾನವಾಗಿದೆ ಎಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ನಡುವೆಯೇ ಅವರು ಆರೋಗ್ಯವಂತರಾಗಿ ಬರಲಿ ಎಂದು ಅಸಂಖ್ಯ ಅಭಿಮಾನಿಗಳು ಹಾರೈಸುತ್ತಿದ್ದರೆ, ಅತ್ತ ಮುಂಬೈನ ಅವರ ಅಭಿಮಾನಿಯಾಗಿರುವ ಆಟೋ ಚಾಲಕ ಸತ್ಯವಾನ್ ಗೀತೆ ಎನ್ನುವವರು ತಮ್ಮ ದುಡಿಮೆಯನ್ನು ಲತಾ ಮಂಗೇಶ್ಕರ್ ಅವರ ಚಿಕಿತ್ಸೆಗಾಗಿ ವಿನಿಯೋಗಿಸುತ್ತಿದ್ದಾರೆ.
ಹಲವಾರು ದಶಕಗಳಿಂದ ಲತಾ ಅವರ ಅಪ್ಪಟ ಅಭಿಮಾನಿಯಾಗಿರುವ ಸತ್ಯವಾನ್ ಗೀತೆ, ತಮ್ಮ ಆಟೋವನ್ನು ಲತಾ ಮಂಗೇಶ್ಕರ್ ಅವರ ಎವರ್ಗ್ರೀನ್ ಹಾಡುಗಳ ಸಾಹಿತ್ಯದಿಂದ ಅಲಂಕರಿಸಿದ್ದಾರೆ. ಅವರ ದೊಡ್ಡ ಫೋಟೋವನ್ನು ಸಹ ಹಾಕಿದ್ದಾರೆ. ಅವರು ತಮ್ಮ ನೆಚ್ಚಿನ ಗಾಯಕಿ 'ಬೇಗನೆ ಗುಣವಾಗಲಿ' ಎಂಬ ಸಂದೇಶಗಳನ್ನು ಬರೆದಿದ್ದಾರೆ. ಲತಾ ಅವರಿಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿರುವ ಇವರು, ತಮ್ಮ ದುಡಿಮೆಯ ಹಣವನ್ನು ನೀಡುತ್ತಿದ್ದಾರೆ.
1942 ರಲ್ಲಿ 13 ನೇ ವಯಸ್ಸಿನಲ್ಲಿ ಗಾಯನವನ್ನು ಶುರು ಮಾಡಿ ಅಲ್ಲಿಂದ ಇಲ್ಲಿಯವರೆಗೂ ವಿಶ್ವಖ್ಯಾತಿ ಗಳಿಸಿರುವ ಗಾಯಕಿ ಲತಾ. ಹಲವಾರು ಭಾರತೀಯ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ನಾಲ್ಕು ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಎರಡು ಫಿಲ್ಮ್ಫೇರ್ ವಿಶೇಷ ಪ್ರಶಸ್ತಿಗಳು, ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ.