

ಉತ್ತರ: ಈಗ ನಿಮ್ಮ ಮುಂದೆ ಎರಡು ಪ್ರಶ್ನೆಗಳಿವೆ. ೧ ಈ ನಿಮ್ಮ ಗೆಳೆಯನನ್ನೇ ಮದುವೆಯಾಗಿ ಜೀವನ ಪರ್ಯಂತ ಅವನ ಅನುಮಾನ ಸಿಟ್ಟು ಕೋಪಗಳನ್ನು ಸಹಿಸಿ ಕೊಂಡು ಬದುಕಬೇಕೆ? ೨ ಇಲ್ಲದಿದ್ದರೆ ನೆಮ್ಮದಿಯ ಮಾರ್ಗವೊಂದನ್ನು ಹುಡುಕಿಕೊಂಡು ಸುಖವಾಗಿ ಬದುಕಬೇಕೇ?
ಮೊದಲನೇ ಪ್ರಶ್ನೆಗೆ ನೀವು ಕೆಲವು ಕಾರಣಗಳನ್ನು ಕೊಟ್ಟಿದ್ದೀರಿ. ೧ ನೀವು ಕೆಲವು ಕಾಲದಿಂದ ಅವನ ಜೊತೆ ಬದುಕಿರುವುದರಿಂದ ಅವನನ್ನು ಬಿಟ್ಟರೆ ಜನ ಏನೆನ್ನುತ್ತಾರೆ ಎನ್ನುವುದು. ನಾನು ಕೇಳುತ್ತೇನೆ ಆತ ನಿಮಗೆ ಹಿಂಸೆಗಳನ್ನು ಕೊಡುವಾಗ ಯಾವ ಜನ ಬಂದು ನಿಮ್ಮನ್ನು ಕಾಪಾಡುತ್ತಾರೆ? ನೀವು ನಿಮಗೋಸ್ಕರ ಬದುಕುತ್ತಿದ್ದೀರೋ ಜನರಿಗೋಸ್ಕರವೋ? ಈ ಕಾಲದಲ್ಲಿ ಮದುವೆಯಾಗಿ ಮಗುವಾದನಂತರವೂ ಗಂಡ ಮತ್ತು ಅವನ ಮನೆಯವರು ಹಿಂಸೆ ಮಾಡಿದರೆ ಮಹಿಳೆಯರು ವಿಚ್ಛೇದನ ತೆಗೆದುಕೊಂಡು ತಮ್ಮ ಕಾಲಮೇಲೆ ತಾವು ನಿಂತು ತಮ್ಮ ಮಗುವಿನ ಬದುಕನ್ನೂ ಕಟ್ಟಿಕೊಡುತ್ತಾರೆ ಯಾವ ಗಂಡಸಿನ ನೆರವೂ ಇಲ್ಲದೇ. ತನಗೆ ಕೆಲಸವೇ ಇಲ್ಲದೇ ನೀವು ಕರೆಯುವ ಕಾಮಧೇನುವಿನಂತೆ ಆತನಿಗೆ ಹಣ ಕೊಡುತ್ತಿದ್ದರೆ , ನೀವು ನಿರಾಕರಿಸಿದರೆ ಆತ ಅಳುವ ನಾಟಕ ಮಾಡದೇ ಇನ್ನೇನು ಮಾಡಿಯಾನು?
ಎರಡನೆಯದು ನೀವು ಆತನನ್ನು ಬಿಟ್ಟರೆ ಆತ ಸತ್ತೇ ಹೋಗಿಬಿಡುತ್ತಾನೆ ಎಂದು ಹೆದರುವುದು! ಇದಂತೂ ಮೂರ್ಖತನದ ಪರಮಾವಧಿ. ನೀವು ಮದುವೆಯಾದ ಮೇಲೂ ನೀವು ಹಣ ಕೊಡಲು ನಿರಾಕರಿಸಿದರೆ ಆತ ಸಾಯಬಹುದಲ್ಲವೇ?
ನಿಮ್ಮಂಥಾ ವಿದ್ಯಾವಂತೆಯರೂ ಮಾನಸಿಕ ವಿಕಲಾಂಗನನ್ನು ‘ ಪ್ರೀತಿಸುತ್ತೇನೆ ಬಿಟ್ಟಿರಲಾರೆ ‘ ಎಂದು ಹಲುಬಿದರೆ ಇದನ್ನು ಮುಗ್ಧತೆ ಎನ್ನಲೋ ಮುರ್ಖತೆ ಎನ್ನಲೋ ನನಗೇ ತಿಳಿಯುತ್ತಿಲ್ಲ. ನೀವು ಓದಿದ್ದೀರಿ ನಿಜ. ಆದರೆ ಜೀವನ ಕೌಶಲ್ಯವನ್ನೇ ಕಲಿತಿಲ್ಲ. ಇರಲಿ. ನಾನು ಬರೀ ಪತ್ರದಲ್ಲಿ ಜೀವನಕೌಶಲ್ಯ ಕಲಿಸಲಾರೆ. ಮತ್ತೆ ನಿಮ್ಮ ಮುಂದೆ ಎರಡು ಆಪ್ಷನ್ಸ್ ಇಡುತ್ತೇನೆ . ೧ ನಿಮಗೆ ಆತನನ್ನು ಬಿಡಲು ಸಾಧ್ಯವಿಲ್ಲದಿದ್ದರೆ ಆತನ ಹತ್ತಿರ ಎರಡು ಕಂಡೀಷನ್ಸ್ ಇಡಿ. ೧ ಆತ ಮೊದಲು ಒಂದು ಉದ್ಯೋಗ ಪಡೆಯಬೇಕು. ಅಲ್ಲಿಯವರೆಗೆ ನಿಮ್ಮನ್ನು ಭೇಟಿ ಮಾಡಬಾರದು. ೨ ಉದ್ಯೋಗ ಪಡೆದರೂ ನಿಮ್ಮ ಜೊತೆ ಮನೋವೈದ್ಯರ ಹತ್ತಿರ ತಪಾಸಣೆ ಮಾಡಿಕೊಂಡು ತನ್ನ ‘ ಅನುಮಾನದ ರೋಗ ‘ ( ಇದನ್ನು ಮನೋವಿಜ್ಞಾನ ಪ್ಯಾರಾನೈಡ್ ಡಿಸಾರ್ಡರ್ ಎನ್ನುತ್ತದೆ ) ಮತ್ತು ಕೋಪವನ್ನು ನಿಭಾಯಿಸಲಾರದ ರೋಗ ( ಎಮೋಷನಲ್ ಡಿಸಾರ್ಡರ್) ಎರಡನ್ನೂ ಥೆರಪಿ ಮತ್ತು ಔಷಧಗಳಿಂದ ವಾಸಿ ಮಾಡಿಕೊಳ್ಳಲು ತಿಳಿಸಿ. ಇವೆರಡು ಶರತ್ತುಗಳಿಗೂ ಆತ ಒಪ್ಪಿಕೊಳ್ಳದೇ ಇದ್ದರೂ ‘ ನಾನು ಆತನ ಜೊತೆಗೇ ಬದುಕುವೆ ‘ ಎಂದೇನಾದರೂ ನೀವು ನಿರ್ಧಾರ ಮಾಡಿದರೆ, ನಿಮ್ಮ ಭವಿಷ್ಯದಲ್ಲಿ ಬಂದೊದಗುವ ಸಂಕಷ್ಟಗಳನ್ನು ದೇವರಿಂದಲೂ ಪರಿಹರಿಸಲು ಆಗುವುದಿಲ್ಲ. ರಾತ್ರಿ ಕಂಡ ಭಾವಿಗೆ ಹಗಲು ಹೋಗಿ ಬಿದ್ದಂತೆ!!! ಆಯ್ಕೆ ನಿಮ್ಮದೇ.
ಡಾ.ಶಾಂತಾ ನಾಗರಾಜ್ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/