

ನವದೆಹಲಿ: ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ಸಂಘರ್ಷ ಬಿಗಿಗೊಂಡಿರುವ ಬೆನಲ್ಲೇ ಇದೀಗ ಚೀನಾ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವ ಸೂಕ್ಷ್ಮ ಪ್ರದೇಶದಿಂದ ಶೇ.30ರಷ್ಟು ಸೇನೆಯನ್ನು ಹಿಂದಕ್ಕೆ ಪಡೆಯಲು ಒಪ್ಪಿಕೊಂಡಿದೆ.
ಇನ್ನು ಎಂಟು ದಿನಗಳ ಒಳಗೆ ಸೇನೆ ಹಿಂದಕ್ಕೆ ಪಡೆಯುವುದಾಗಿ ಚೀನಾ ಹೇಳಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ದೀರ್ಘಕಾಲದ ಮಾತುಕತೆ ಬಳಿಕ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ.
ಈ ನಡುವೆಯೇ, ಚೀನಾದ ಒಪ್ಪಿಗೆಯ ನಂತರ ಭಾರತ ಕೂಡ ಸೇನೆಯನ್ನು ಹಿಂದಕ್ಕೆ ಸರಿಸಲು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಉಭಯ ದೇಶಗಳ ನಡುವಿನ ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನವೆಂಬರ್ 6ರಂದು ಚುಶೂಲ್ನಲ್ಲಿ ಎಂಟನೇ ಬಾರಿ ಮಿಲಿಟರಿ ಕಮಾಂಡರ್ ಹಂತದ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಉಭಯ ದೇಶಗಳು ಮಾತುಕತೆ ನಡೆಸಿವೆ ಎನ್ನಲಾಗಿದೆ.
ಭಾರತ ಮತ್ತು ಚೀನಾ ಸೇರಿದಂತೆ ಎರಡೂ ದೇಶಗಳ ಯೋಧರು ಮೈನಸ್ 20ಡಿಗ್ರಿ ಸೆಲ್ಸಿಯಸ್ ಚಳಿಗಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ತಕ್ಷಣಕ್ಕೆ ಜಾರಿಯಾಗುವಂತೆ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿದೆ.
ಸೇನೆ ಹಿಂದಕ್ಕೆ ಪಡೆಯುವುದೂ ಸೇರಿದಂತೆ ಮೂರು ಹಂತಗಳ ಸಂಘರ್ಷರಹಿತ ಪ್ರಸ್ತಾಪಕ್ಕೆ ಭಾರತ ಮತ್ತು ಚೀನಾ ಒಪ್ಪಿಕೊಂಡಿರುವುದಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯ ಗಡಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿಲ್ಲ. ಈಗಾಗಲೇ 8 ಸುತ್ತಿನ ಮಾತುಕತೆ ನಡೆದಿದ್ದು, ಈ ವಾರದಲ್ಲಿ 9ನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.