

ಅಮರಾವತಿ (ಮಹಾರಾಷ್ಟ್ರ): ಕರೊನಾ ವೈರಸ್ ಪರೀಕ್ಷೆಗೆ ಹೋಗುವವರ ಮೇಲೆ ಅತ್ಯಾಚಾರ ನಡೆಯುತ್ತಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.
ಇದರ ನಡುವೆಯೇ ಶಾಕಿಂಗ್ ಎನ್ನಿಸುವಂಥ ಪ್ರಕರಣವೊಂದರಲ್ಲಿ ಕರೊನಾ ಪರೀಕ್ಷೆಗೆಂದು ಹೋಗಿದ್ದ ಯುವತಿಯ ಯೋನಿಯ ದ್ರವವನ್ನು ಸಂಗ್ರಹಿಸಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಯುವತಿ ಕರೊನಾ ಪರೀಕ್ಷೆಗೆಂದು ಹೋಗಿದ್ದ ಸಂದರ್ಭದಲ್ಲಿ ಲ್ಯಾಬ್ ಟೆಕ್ನಿಷಿಯನ್ ಈ ರೀತಿ ಮಾಡಿರುವುದಾಗಿ ಯುವತಿ ದೂರಿದ್ದಾಳೆ.
ತಾನು ಪರೀಕ್ಷೆಗೆ ಹೋಗಿದ್ದ ಸಂದರ್ಭದಲ್ಲಿ ಯೋನಿ ದ್ರವವನ್ನು ಸಂಗ್ರಹಿಸಬೇಕು ಎಂದು ಲ್ಯಾಬ್ ಸಿಬ್ಬಂದಿ ಹೇಳಿದ. ಮೊದಲು ನಾನು ಅದಕ್ಕೆ ಒಪ್ಪಲಿಲ್ಲ. ಆದರೆ ಕರೊನಾ ಪರೀಕ್ಷೆ ಮಾಡಬೇಕು ಎಂದರೆ ಹೀಗೆ ಮಾಡಲೇಬೇಕು ಎಂದು ನನಗೆ ಹೇಳಿದ. ಎಲ್ಲರೂ ಹೀಗೆಯೇ ಮಾಡಿಸಿಕೊಳ್ಳುವುದು, ಇದರಿಂದಲೇ ಕರೊನಾ ಪಾಸಿಟಿವ್ ಅಥವಾ ನೆಗೆಟಿವ್ ಎಂದು ತಿಳಿಯುವುದು ಎಂದು ಹೇಳಿದ. ಅದನ್ನು ನಾನು ನಂಬಿದೆ ಎಂದು ಯುವತಿ ಹೇಳಿದ್ದಾಳೆ.
ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಸಹೊದ್ಯೋಗಿಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ, ಈಕೆ ಕೂಡ ಪರೀಕ್ಷೆಗೆ ಹೋಗಿದ್ದಾಳೆ. ಪರೀಕ್ಷೆ ಮುಗಿಸಿ ಬಂದ ಮೇಲೆ ಅನುಮಾನಗೊಂಡಿರುವ ಆಕೆ ತನ್ನ ಸ್ನೇಹಿತೆಯರ ಬಳಿ ಈ ವಿಷಯ ತಿಳಿಸಿದಾಗ ಅಂಥ ಪರೀಕ್ಷೆ ಇರುವುದಿಲ್ಲ, ಗಂಟಲ ದ್ರವ ಮಾದರಿಯನ್ನು ಮಾತ್ರ ತೆಗೆದುಕೊಳ್ಳುವುದಾಗಿ ಹೇಳಿದ್ದಾಳೆ. ಇದರಿಂದ ಯುವತಿ ದೂರು ದಾಖಲು ಮಾಡಿದ್ದಾಳೆ.
ಇದನ್ನೂ ಓದಿ: ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ ಯುವಕ!
ಇದೀಗ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಅತ್ಯಾಚಾರದ ಕೇಸು ದಾಖಲು ಮಾಡಲಾಗಿದೆ.
ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಯಶೋಮತಿ ಠಾಕೂರ್ ಈ ಘಟನೆಯನ್ನು ಗಂಭೀರವಾಗಿ ಗಮನಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.