'ನಮ್ಮ ಪ್ರವಾದಿ​, ನಮ್ಮ ಹೆಮ್ಮೆ' ಎಂದು ನೂಪುರ್​ ವಿರುದ್ಧ ಪ್ರತಿಭಟಿಸಿದ ಭಾರತೀಯರನ್ನು ಗಡಿಪಾರು ಮಾಡಲಿದೆ ಕುವೈತ್​!

nupur
Published on

ಕುವೈತ್​: ಹಿಂದೂ ದೇವರ ಅವಹೇಳನ ಮಾಡಿರುವುದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಅವರ ಕುರಿತಾಗಿ ಮಾತನಾಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಭಾರತದ ಕೆಲವು ವರ್ಗಗಳಿಂದ ಹಾಗೂ ಹಲವು ಮುಸ್ಲಿಂ ರಾಷ್ಟ್ರಗಳಿಂದ ಜೀವ ಬೆದರಿಕೆ ಬರುತ್ತಿವೆ. ಆದರೆ ಈ ನಡುವೆಯೇ ಕುತೂಹಲದ ಬೆಳವಣಿಗೆಯೊಂದರಲ್ಲಿ ಮುಸ್ಲಿಂ ರಾಷ್ಟ್ರವೇ ಆಗಿರುವ ಕುವೈತ್​ನಲ್ಲಿ ಪ್ರತಿಭಟನೆ ಮಾಡಲು ಹೋಗಿರುವ ಭಾರತೀಯರು ಈಗ ಗಡಿಪಾರಾಗುವ ಅಂಚಿನಲ್ಲಿದ್ದಾರೆ!

ಕುವೈತ್​ನಲ್ಲಿ ಪ್ರತಿಭಟನೆ ಮಾಡಿರುವ ಭಾರತೀಯರು ಮಾತ್ರವಲ್ಲದೇ ಎಲ್ಲಾ ವಲಸಿಗರನ್ನೂ ಬಂಧಿಸಿ ಗಡಿಪಾರು ಮಾಡಲು ಕುವೈತ್ ಸರ್ಕಾರ ನಿರ್ಧರಿಸಿದ್ದು, ಆ ನಿರ್ಧಾರವನ್ನು ಹಿಂಪಡೆಯುವ ಸಾಧ್ಯವೇ ಇಲ್ಲ ಎಂದಿದೆ. ಮೊದಲಿಗೆ ಪ್ರತಿಭಟನೆ ಮಾಡಿದ ವಲಸಿಗರನ್ನು ಬಂಧಿಸಿ ನಂತರ ಅವರನ್ನು ಗಡಿಪಾರು ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಮುಸ್ಲಿಂ ರಾಷ್ಟ್ರ ಕುವೈತ್​, ಭಾರತೀಯರು ಸೇರಿದಂತೆ ವಲಸಿಗರ ಇಷ್ಟೊಂದು ಕಠೋರ ನಿರ್ಧಾರ ತೆಗೆದುಕೊಳ್ಳಲು ಕಾರಣ, ಇಲ್ಲಿನ ಕಾರ್ಮಿಕ ಕಾನೂನು. ಕಾನೂನು ಪರಿಪಾಲನೆಯನ್ನು ಚಾಚೂತಪ್ಪದೇ ಪಾಲಿಸುತ್ತಿದೆ ಕುವೈತ್​. ಅದರಲ್ಲಿಯೂ ವಲಸಿಗರಿಗಾಗಿ ಇರುವ ಕಾನೂನು ಬಹಳ ಕಠಿಣವಾಗಿದ್ದು, ಅದನ್ನು ವಲಸಿಗರು ಮೀರುವಂತೆಯೇ ಇಲ್ಲ. ಆದರೆ ಈ ಕಾನೂನು ಮೀರಿ ಭಾರತೀಯರು ಹಾಗೂ ಇತರ ದೇಶಗಳ ಜನರು ನಡೆದುಕೊಂಡಿರುವುದೇ ಇದೀಗ ಸಂಕಷ್ಟಕ್ಕೆ ಸಿಲುಕಿಸಿದೆ.

ಅಷ್ಟಕ್ಕೂ ಈ ಕಾನೂನು ಏನೆಂದರೆ, ಕುವೈತ್‌ನಲ್ಲಿ ವಲಸಿಗರು ಸಂಘಟನೆ ಮಾಡುವ ಹಾಗೂ ಪ್ರತಿಭಟನೆ ಮಾಡುವ ಹಕ್ಕನ್ನು ಹೊಂದಿಲ್ಲ. ಈ ಬಗ್ಗೆ ಅವರಿಗೆ ಮೊದಲೇ ಎಚ್ಚರಿಕೆ ನೀಡಲಾಗುತ್ತದೆ. ಕಾನೂನಿನ ವಿಷಯದಲ್ಲಿ ಕುವೈತ್ ಸರ್ಕಾರ ಮೃದು ಧೋರಣೆ ತಾಳಲು ಸಾಧ್ಯವೇ ಇಲ್ಲ. ಆದ್ದರಿಂದ ಎಲ್ಲರೂ ಈಗ ಬಂಧನಕ್ಕೆ ಸಿಲುಕಿ ತಂತಮ್ಮ ದೇಶಗಳಿಗೆ ವಾಪಸ್​ ಹೋಗಲೇಬೇಕಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕುವೈತ್ ಮೂಲದ ಭಾರತೀಯ ಪತ್ರಕರ್ತ ಜೀವ್ಸ್ ಎರಿಂಜೆರಿ, ಕುವೈತ್ ತನ್ನ ಕಾನೂನುಗಳೊಂದಿಗೆ ತುಂಬಾ ಕಟ್ಟುನಿಟ್ಟಾಗಿದೆ ಮತ್ತು ನಿರ್ದಿಷ್ಟವಾಗಿದೆ. ಕೆಲವೇ ವಾರಗಳಲ್ಲಿ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂದಿದ್ದಾರೆ. ಇಲ್ಲಿಯ ಕಾನೂನಿನ ವಿಷಯಕ್ಕೆ ಬಂದರೆ ಯಾವ ದೇಶವೂ ಮೂಗು ತೂರಿಸುವಂತೆ ಇಲ್ಲ. ಆದ್ದರಿಂದ ಭಾರತೀಯರ ಪರ ವಹಿಸಿ ಭಾರತ ಸರ್ಕಾರವಾಗಲೀ ಅಥವಾ ತಮ್ಮ ದೇಶದವರ ಪರ ವಹಿಸಿ ಆಯಾ ದೇಶದವರು ಈ ಕಾನೂನನ್ನು ಪ್ರಶ್ನೆ ಮಾಡುವ ಅಧಿಕಾರವೇ ಇಲ್ಲ. ಆದ್ದರಿಂದ ಯಾವುದೇ ದೇಶವೂ ಕಾನೂನು ಮೀರಿದವರನ್ನು ಬೆಂಬಲಿಸುವ ಸಾಧ್ಯತೆಯೇ ಇಲ್ಲ ಎಂದಿದ್ದಾರೆ ಜೀವ್ಸ್ ಎರಿಂಜೆರಿ.

ಕುವೈತ್​ಗೆ ವಲಸೆ ಹೋಗಿರುವ ಭಾರತೀಯರ ಸಂಖ್ಯೆ 2019 ರಲ್ಲೇ 10 ಲಕ್ಷ ದಾಟಿತ್ತು. ಈ ದೇಶದಲ್ಲಿ ಭಾರತೀಯರ ಸಂಖ್ಯೆ ಪ್ರತಿವರ್ಷ ಶೇ.5-6 ರಷ್ಟು ಏರಿಕೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net